

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್, ಎಂದಿನಂತೆ ತಮ್ಮ ಖಡಕ್ ಮಾತಿನ ಶೈಲಿಯಲ್ಲೇ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದೋ ಕೊಟ್ಟಿದ್ದು, ಮೊದಲ ದಿನವೇ ಮನೆಯಲ್ಲಿ ಕಿಚ್ಚು ಹೆಚ್ಚಾಗಿದೆ.
ಸ್ವರ್ಗನಿವಾಸಿಗಳು ಮತ್ತು ನರಕನಿವಾಸಿಗಳ ಮಧ್ಯೆ ದೊಡ್ಡ ಜಟಾಪಟಿಯೇ ಭುಗಿಲೆದ್ದಿದ್ದು, ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್ ಮಾತೇ ಮನೆ ತುಂಬ ಪ್ರತಿಧ್ವನಿಸುತ್ತಿದೆ. ಈ ಮಧ್ಯೆ ಜಗದೀಶ್ ಮಾತ್ರ ಒಂದು ಹಜ್ಜೆ ಮುಂದೆ ಹೋಗಿದ್ದು, 16 ಸ್ಪರ್ಧಿಗಳು ನನ್ನ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದು ಚಿರಾಡಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಲಾಯರ್ ಜಗದೀಶ್ ಬಿಗ್ಬಾಸ್ಗೆ ಸವಾಲು ಹಾಕಿದ್ದು, ನಿಮ್ಮ ಅಸಲಿ ಮುಖವನ್ನು ಕಳಚಿಡುತ್ತೇನೆ ಎಂದಿದ್ದಾರೆ. ಸದ್ಯ ಇದ್ಯಾವುದು ಸರಿಯಿಲ್ಲ ಎನ್ನುತ್ತಿರುವಾಗಲೇ 'ಬಿಗ್' ಮನೆಯಲ್ಲಿ ಪ್ರೀತಿ ಚಿಗುರೊಡೆದಿರುವಂತೆ ಭಾಸವಾಗಿದೆ.
ಮನೆಯಲ್ಲಿ ತಮ್ಮ ತಾಳ್ಮೆ, ಸರಳತೆಯಿಂದಲೇ ಎಲ್ಲರ ಮೆಚ್ಚುಗೆ, ಗೌರವ ಗಿಟ್ಟಿಸಿಕೊಂಡಿರುವ ಧರ್ಮ ಕೀರ್ತಿರಾಜ್, ಸ್ವರ್ಗನಿವಾಸಿಯಾದ ಐಶ್ವರ್ಯ ಶಿಂಧೋಗಿ ಮತ್ತು ನರಕನಿವಾಸಿಯಾದ ಅನುಷಾ ರೈ ಜತೆ ಮುತ್ತಿನಂತ ಮಾತಿನಲ್ಲಿ ತೊಡಗಿದ್ದಾರೆ. ಒಂದೆಡೆ ಐಶ್ವರ್ಯಗೆ ಹಣ್ಣು ಕಟ್ ಮಾಡಿ ಕೊಡುವುದು, ಅವರ ಬಗ್ಗೆ ಕಾಳಜಿ ವಹಿಸುವುದು ಮಾಡಿದರೆ, ಮತ್ತೊಂದೆಡೆ ಅನುಷಾ ಕೈಹಿಡಿದು, ಸಲಿಗೆಯಿಂದ ಓಡಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ಕೂಡ ಹೊರಬಿದ್ದಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಅಸಲಿಗೆ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ? ಮುಂದಿನ ಟಾಸ್ಕ್ ಏನು? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.