

ಬೆಂಗಳೂರು: ಬಿಗ್‌ಬಾಸ್ ಮನೆಯೊಳಗೆ ದೀಪಗಳ ಹಬ್ಬದ ಸಂಭ್ರಮ ತುಂಬಿದೆ. ಅದರ ಜತಗೆ ವೀಕೆಂಡ್ ಎಪಿಸೋಡ್‌ಗಳಲ್ಲಿ ಕಿಚ್ಚನ ಮಾತಿನ ಪಟಾಕಿಯೂ ಬಲು ಜೋರಾಗಿಯೇ ಸದ್ದು ಮಾಡುತ್ತಿದೆ. ಇದೀಗ ಶನಿವಾರ ಸಂಚಿಕೆಯನ್ನು ಕಳೆದು ಭಾನುವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳು ಸೂಪರ್ ಸಂಡೆ ವಿತ್ ಸುದೀಪ್ ಕಾರ್ಯಕಮದಲ್ಲಿ ಭಾಗಿಯಾದರು. ಈ ವೇಳೆ ನಾಮಿನೇಟ್ ಆಗಿದ್ದವರನ್ನು ಸೇಫ್ ಮಾಡಿದ ಸುದೀಪ್ ಅವರಿಗೆ ಬೇಸರ ಹಾಗೂ ಶಾಕಿಂಗ್ ಸಂಗತಿಯೊಂದು ಎದುರಾಯಿತು.
ವಿವಿಧ ಹಂತಗಳಲ್ಲಿ ಮನೆಯ ಸದಸ್ಯರ ವರ್ತನೆಗಳನ್ನು ವಿಶ್ಲೇಷಿಸುತ್ತ, ಸುದೀಪ್ ಎಲಿಮಿನೇಷನ್‌ನಿಂದ ಸೇಫ್ ಆದ ಸ್ಪರ್ಧಿಗಳ ಹೆಸರುಗಳನ್ನು ಹೇಳಿದರು. ಸುದೀಪ್ ಒಬ್ಬೊಬ್ಬರ ಹೆಸರು ಹೇಳುತ್ತಿದ್ದಂತೆ ನಾಮಿನೇಷನ್ ಲೀಸ್ಟ್‌ನಲ್ಲಿ ಇರುವ ಸ್ಪರ್ಧಿಗಳ ಎದೆಯ ಬಡಿತ ಹೆಚ್ಚುತ್ತಲೇ ಇತ್ತು. ಆದರೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಟ್ವಿಸ್ಟ್ ಒಂದು ಅಚಾನಕ್ಕಾಗಿ ಎದುರಾಗಿದ್ದು, ಇತರ ಸ್ಪರ್ಧಿಗಳಿಗೆ ಶಾಕ್ ನೀಡಿದೆ!
ಈ ವಾರ ಸೇಫ್ ಆದ ಸ್ಪರ್ಧಿಗಳ ಹೆಸರು ಹೇಳುವಾಗ ಸುದೀಪ್ ಬಾಯಲ್ಲಿ ವರ್ತೂರು ಸಂತೋಷ್ ಅವರ ಹೆಸರು ಬರುತ್ತಿದ್ದಂತೆಯೇ ಮನೆಯ ಸದಸ್ಯರೆಲ್ಲ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಆದರೆ, ಈ ಖುಷಿ ಸಂತೋಷ್ ಮುಖದಲ್ಲಿ ಕಾಣಿಸಿಲ್ಲ. ಬದಲಿಗೆ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು.
ಸುದೀಪ್ ಮುಂದೆ ಕಣ್ಣೀರಿಟ್ಟ ವರ್ತೂರು ಸಂತೋಷ್, ‘ಹೊರಗಡೆ ಏನೋ ಒಂದು ಘಟನೆ ನಡೆಯಿತು. ಅದರಿಂದ ಹೊರಗೆ ಬಂದು ಆಡಬೇಕು ಎಂದು ಮತ್ತೆ ಒಳಗೆ ಬಂದೆ. ಆದರೆ ನನಗೆ ಸಾಧ್ಯವಾಗುತ್ತಿಲ್ಲ. ನಾನು ಹೊರಗಡೆಯೇ ಇರಲು ಇಷ್ಟಪಡುತ್ತೇನೆ’ ಎಂದು ಸುದೀಪ್ ಬಳಿ ವಿನಂತಿಸಿಕೊಂಡರು. ಈ ಪರಿಸ್ಥಿತಿ ಮನೆಯ ಸದಸ್ಯರೆಲ್ಲರನ್ನೂ ಒಂದು ಕ್ಷಣ ಅಚ್ಚರಿಗೆ ದೂಡಿತು.
ಈ ವಾರ ವರ್ತೂರು ಸಂತೋಷ್ ಅವರನ್ನು ಸೇವ್ ಮಾಡಲು ಅಧಿಕ ಜನರು ವೋಟ್ ಮಾಡಿದ್ದಾರೆ. ಇದನ್ನೂ ಸುದೀಪ್ ಕೂಡ ಪ್ರಸ್ತಾಪಿಸಿದರು. ಆದರೆ ಸಂತೋಷ್ಗೆ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲ. ಹೊರಗೆ ಹೋಗಬೇಕು ಎಂಬ ಹಂಬಲ ತೀವ್ರವಾಗುತ್ತಿದೆ. ಮನೆ ಮಂದಿಯೆಲ್ಲ ಸಂತೋಷ್ ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದ್ರೂ ಕೂಡ ಸಂತೋಷ್ ಇರಲು ಇಚ್ಛಿಸುತ್ತಿಲ್ಲ.
ಈ ಘಟನೆಯಿಂದ ಬೇಸರಗೊಂಡ ಸುದೀಪ್ ವೇದಿಕೆಯಿಂದ ತೆರಳಿದ್ದಾರೆ. ಸದ್ಯ ಸದಸ್ಯರು ಹಾಗೂ ಸುದೀಪ್ ಮಾತಿಗೆ ಗೌರವ ಕೊಟ್ಟು ಸಂತೋಷ್ ಬಿಗ್‌ಬಾಸ್ ಮನೆಯಲ್ಲೇ ಉಳಿಯುತ್ತಾರಾ ಅಥವಾ ಹೊರ ಹೋಗುತ್ತಾರಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.