

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ ಯಶಸ್ವಿ 15 ವಾರಗಳನ್ನು ಪೂರೈಸಿದ್ದು, 16ನೇ ವಾರದತ್ತ ಮುಖಮಾಡುತ್ತಿದ್ದಾರೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂದು ಹೇಳಲಾದ ಬಿಗ್ ಬಾಸ್ ಸೀನಸ್ 10 ಇದೀಗ ಕೊನೆಯ ಹಂತವನ್ನು ತಲುಪಿದ್ದು, ಫಿನಾಲೆಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಸ್ನೇಹ, ಪ್ರೀತಿ, ಜಗಳ, ಮನಸ್ತಾಪಗಳ ನಡುವೆ 16 ಸ್ಪರ್ಧಿಗಳ ಪೈಕಿ ಸದ್ಯ ಮನೆಯೊಳಗೆ ಉಳಿದುಕೊಂಡಿರುವುದು ಕೇವಲ 7 ಸದಸ್ಯರು ಮಾತ್ರ, ಇವರಲ್ಲಿ ಇಂದು ಒಬ್ಬರಿಗೆ ಫಿನಾಲೆ ಕನಸು ಭಗ್ನಗೊಳ್ಳುವುದು ಖಚಿತ!
ಬಿಗ್ ಬಾಸ್ ಸೀಸನ್ 10 ಪ್ರಾರಂಭಗೊಂಡ ಮೊದಲ ದಿನದಿಂದಲೂ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ವಿನಯ್ ಮತ್ತು ಸಂಗೀತಾ ಎಲ್ಲಾ ರೀತಿಯಲ್ಲೂ ಮನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಸುದೀಪ್, ಈ ಕಾರಣಕ್ಕಾಗಿ ಈ ಸೀನಸ್ನ ಕೊನೆಯ ಕಿಚ್ಚನ ಚಪ್ಪಾಳೆಯನ್ನು ನಿಮ್ಮಿಬ್ಬರಿಗೂ ನೀಡುತ್ತಿದ್ದೇನೆ ಎಂದು ಹೇಳಿದರು. ಕಿಚ್ಚನ ಚಪ್ಪಾಳೆ ಪಡೆದ ಸಂಗೀತಾ-ವಿನಯ್ ಒಂದು ಕ್ಷಣ ಭಾವುಕರಾಗಿ ಧನ್ಯವಾದ ತಿಳಿಸಿದರು.
ಇದೆಲ್ಲದರ ನಡುವೆ ಸದ್ಯ ಸೀಸನ್ 10ರ ಪಟ್ಟ ಯಾರಿಗೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗುತ್ತಿದ್ದು, ಪ್ರಥಮ ಬಾರಿಗೆ ವೀಕ್ಷಕರು ಭಾರೀ ಗೊಂದಲಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಕಾರಣ, ಪ್ರತಿ ಬಿಗ್ ಬಾಸ್ ಸೀಸನ್ ಅಂತಿಮ ಹಂತ ತಲುಪುವಷ್ಟರಲ್ಲಿ ವೀಕ್ಷಕರು ಇವರು ಖಂಡಿತ ಗೆಲ್ಲುತ್ತಾರೆ. ಇವರಿಗೆ ಬಿಗ್ ಬಾಸ್ ಟ್ರೋಫಿ ಫಿಕ್ಸ್ ಎಂದು ತಮ್ಮಲ್ಲೇ ನಿರ್ಧರಿಸುತ್ತಾರೆ. ಆದ್ರೆ, ಇದೇ ಮೊದಲ ಬಾರಿಗೆ ಯಾರು ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಕಷ್ಟಕರವಾಗಿದೆ.
ಇಬ್ಬರಲ್ಲಿ ಒಬ್ಬರು ವಿನ್ನರ್ ಆಗಬಹುದು ಎಂದು ಹೇಳಬಹುದು. ಆದ್ರೆ, ಫಿನಾಲೆ ಪ್ರವೇಶಿಸುವವರ ಪೈಕಿ ಎಲ್ಲರು ಅದ್ಬುತ ಪ್ರದರ್ಶನ ನೀಡಿದ್ದು, ಸೀಸನ್ ವಿಜೇತರಾಗಲು ಇವರು ಅರ್ಹರಲ್ಲ ಎಂದು ಹೇಳಲು ವೀಕ್ಷಕರಿಗೆ ಅಸಾಧ್ಯವಾಗಿದೆ ಎಂಬದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು, ಮನೆಯೊಳಗಿರುವ ಸ್ಪರ್ಧಿಗಳ ಪೈಕಿ ಹೆಚ್ಚಾಗಿ ಪ್ರತಾಪ್, ವಿನಯ್, ಸಂಗೀತಾ ಮತ್ತು ಕಾರ್ತಿಕ್ ಹೆಸರನ್ನು ಪರಿಗಣಿಸಿದ್ದಾರೆ.
ಇವರ ಪೈಕಿ ಫಿನಾಲೆ ವೇದಿಕೆ ತಲುಪಿ, ಸುದೀಪ್ ಅವರ ಎಡಗೈ ಹಾಗೂ ಬಲಗೈನಲ್ಲಿ ಕಾರ್ತಿಕ್ ಮತ್ತು ಪ್ರತಾಪ್ ಇರಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ. ಒಂದೆಡೆ ಪ್ರತಾಪ್ ಗೆಲ್ಲಬೇಕು ಎಂದು ಹೇಳಿದ್ರೆ, ಮತ್ತೊಂದೆಡೆ ಕಾರ್ತಿಕ್ ವಿಜೇತರಾಗಬೇಕು ಎಂದು ಹೇಳಿದ್ದಾರೆ. ಒಟ್ಟಾರೆ ವೀಕ್ಷಕರ ಪ್ರಕಾರ ಈ ಇಬ್ಬರೇ ಫಿನಾಲೆಗೆ ಬರುತ್ತಾರೋ ಅಥವಾ ಲೆಕ್ಕಾಚಾರಗಳು ಬದಲಾಗಲಿದೆಯಾ ಎಂಬುದನ್ನು ಗ್ರ್ಯಾಂಡ್ ಫಿನಾಲೆ ದಿನದಂದೇ ಅಧಿಕೃತವಾಗಿ ತಿಳಿಯಬೇಕಿದೆ.