BBKS10: 'ಟಾಪ್​​ ಫೈನಲಿಸ್ಟ್​ ಆಗಿ ಈ ಐವರು ಇರಲಿದ್ದಾರೆ'; ನೀತು ಹೆಸರಿಸಿದ ಸ್ಪರ್ಧಿಗಳು ಇವರೇ ನೋಡಿ

Untitled design (71)
Published on

ಬೆಂಗಳೂರು: ಇತ್ತೀಚೆಗಷ್ಟೇ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಬಿಗ್​ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳಿಗೆ ಸುದೀಪ್​ ವಿಶೇಷ ಅಭಿನಂದನೆ ತಿಳಿಸಿ, ಮುಂಬರುವ ದಿನಗಳಿಗೆ ಶುಭಕೋರಿದರು. ಈ ಸಿಹಿ ಸಂದರ್ಭದಲ್ಲಿ ಕಹಿಯಾದ ಎಲಿಮಿನೇಷನ್​ ಪ್ರಕ್ರಿಯೆ ಮುಂದುವರೆಸಿದ ಕಿಚ್ಚ ಸುದೀಪ್​, ಏಳನೇ ವಾರದ ಅಂತ್ಯಕ್ಕೆ ನೀತು ವನಜಾಕ್ಷಿ ಅವರ ಆಟ ಮುಗಿದಿದೆ ಎಂದು ಹೇಳಿದರು. ಸದ್ಯ ಮನೆಯಿಂದ ಹೊರಬಂದ ನೀತು, ಮನೆಯೊಳಗಿನ ಕೆಲವು ಕುತೂಹಲಕಾರಿ ವಿಚಾರಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

"ಮನೆಯಿಂದ ಹೊರಗಡೆ ಬರುತ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ಕಳೆದ ಎರಡು ವಾರದಿಂದ ನನ್ನ ಆಟದ ವೈಖರಿ ತುಂಬ ಕಡಿಮೆಯಿತ್ತು. ಆದರೆ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂ ಮಾಡಲು ಸಾಧ್ಯವಿಲ್ಲ. ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಆರಂಭದಲ್ಲಿ ಜಗಳವಾಡ್ತಿದ್ದೆ. ಸರಿಯಾದ ವಿಷಯಕ್ಕೆ ಜಟಾಪಟಿ ಮಾಡ್ತಿದ್ದೆ" ಎಂದರು.

"ದಿನಗಳು ಕಳೆದಂತೆ ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿದೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನು ಒಪ್ಪಿಕೊಂಡು ಬಿಡುತ್ತಿದ್ದೆ. ಅಲ್ಲಿ ಇನ್ನೂ ಸ್ವಲ್ಪ ಚುರುಕಾಗಿದ್ದಿದ್ರೆ ನಾನು ಉಳಿಯಬಹುದಾಗಿತ್ತು. ಯಾವಾಗ ನನಗೆ ಕಿಚ್ಚನ ಚಪ್ಪಾಳೆ ಬಂತೋ, ನನಗದು ಟ್ರೋಫಿ ಪಡೆದಷ್ಟೇ ಖುಷಿಯಾಯ್ತು. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಆತ್ಮವಿಶ್ವಾಸ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ" ಎಂದರು.

ನಿಮ್ಮ ಪ್ರಕಾರ ಫೈನಲಿಸ್ಟ್‌ ಆಗಿ ಯಾರೆಲ್ಲಾ ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ನೀತು, "ಪ್ರತಾಪ್‌, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಬಾರಿಯ ಬಿಗ್‌ಬಾಸ್‌ ಸೀಸನ್​ 10ರ ಫೈನಲ್‌ನಲ್ಲಿ ಇರುತ್ತಾರೆ. ಐವರ ಪೈಕಿ ಪ್ರತಾಪ್ ವಿನ್ನರ್ ಆಗಿ ಹೊರಬರುತ್ತಾರೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net