BBKS10: ಸ್ನೇಹಿತೆಗೆ ಕೈ ಕೊಟ್ಟ ಸ್ನೇಹಿತ್​?; ಒಂದೇ ಒಂದು ನಿರ್ಣಯ, ನಮ್ರತಾ ಕಣ್ಣಲ್ಲಿ ನೀರು!

Untitled design (48)
Published on

ಬೆಂಗಳೂರು: ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್​ನಲ್ಲಿ ಮನೆಯ ಸ್ಪರ್ಧಿಗಳು ಆಡಿದ ಆಟದ ವೈಖರಿ ವೀಕ್ಷಕರನ್ನು ಅಚ್ಚರಿಗೆ ದೂಡಿದ್ದಂತು ಅಕ್ಷರಶಃ ಸತ್ಯ! ಬಿಗ್‌ಬಾಸ್ ಮನೆ ಈ ವಾರದಲ್ಲಿ ಹಲವು ಕೋಲಾಹಲಗಳಿಗೆ, ಕೋಪ ತಾಪಗಳಿಗೆ, ಜಗಳಗಳಿಗೆ, ರೋಷಾವೇಶಗಳಿಗೆ ಸಾಕ್ಷಿಯಾಗಿದೆ. ವಾರಾಂತ್ಯ ಸಮೀಪಿಸುತ್ತಿದ್ದಂತೆಯೇ ಮನೆಯೊಳಗಿನ ಲೆಕ್ಕಾಚಾರಗಳೂ ಬದಲಾಗುತ್ತಿವೆ.


ಈ ವಾರ ಮನೆಯ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ ಸ್ನೇಹಿತ್‌ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ಅಲ್ಲದೆ ಮನೆಯಲ್ಲಿ ತಂಡಗಳನ್ನು ರಚಿಸುವ, ವಾರವಿಡೀ ಬಿಗ್‌ಬಾಸ್ ನೀಡುವ ಟಾಸ್ಕ್‌ಗಳ ಉಸ್ತುವಾರಿ ವಹಿಸುವ ಜವಾಬ್ದಾರಿಯನ್ನೂ ಸ್ನೇಹಿತ್‌ಗೆ ಒಪ್ಪಿಸಲಾಗಿತ್ತು. ತಂಡವನ್ನು ರಚಿಸುವ ಹಂತದಲ್ಲಿಯೇ ಉಸ್ತುವಾರಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯ ವಾರವಿಡೀ ಎಗ್ಗಿಲ್ಲದೆ ಸಾಗಿತು.

ಸಂಗೀತಾ ನಾಯಕತ್ವದ ತಂಡದ ಪ್ರಕಾರ ಸ್ನೇಹಿತ್‌, ವರ್ತೂರು ಅವರ ತಂಡದ ಪರವಾಗಿ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ರತಾ ಮತ್ತು ವಿನಯ್ ಅವರಿಂದ ಪ್ರಭಾವಿತರಾಗಿ ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಲೇ ಇದ್ದವು. ಆದ್ರೆ, ವಾರಾಂತ್ಯದಲ್ಲಿ ಬಿಗ್‌ಬಾಸ್‌, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ.

‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದು, ಕ್ಯಾಪ್ಟನ್ಸಿ ಸ್ಪರ್ಧೆಯಿಂದ ನಮ್ರತಾ ಮತ್ತು ವಿನಯ್ ಅವರನ್ನು ಸ್ನೇಹಿತ್​ ಶಾಕಿಂಗ್ ರೀತಿಯಲ್ಲಿ ಹೊರಗಿಟ್ಟಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು.

ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್‌ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್‌ ಮಾತು ಕೇಳಿ ಬೇಸರವಾಗಿದೆ. ‘ಇವನು ಯಾವ ಫ್ರೆಂಡ್‌’ ಎಂದು ವಿನಯ್​ ಬಳಿ ಹೇಳಿದ ನಮ್ರತಾ, ಕೆಲ ಸಮಯ ಕಣ್ಣೀರಿಟ್ಟಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಇನ್ನು ಯಾರನ್ನೆಲ್ಲ ಸ್ನೇಹಿತ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net