

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳ ಮಧ್ಯೆ ಬಿರುಸಿನ ವಾದ-ಪ್ರತಿವಾದ ನಡೆದಿದ್ದು, ಮನೆಯೊಳಗಿನ ತಮ್ಮ ಉಳಿವಿಗಾಗಿ ಮಾತಿನ ಚಕಮಕಿಯಲ್ಲಿ ತೊಡಗಿದರು. ಈ ವೇಳೆ ಮನೆಯ ಕ್ಯಾಪ್ಟನ್ ಆಗಿ ಸೂಪರ್ ಪವರ್ ಪಡೆದುಕೊಂಡ ಸ್ನೇಹಿತ್, ವಾದ ಮಂಡಿಸುವ ಸದಸ್ಯರ ಪೈಕಿ ತಮಗೆ ಅನಿಸಿದ ವ್ಯಕ್ತಿಯಗಳನ್ನು ಸೇವ್ ಮಾಡುವ ಅಧಿಕಾರ ಹೊಂದಿದ್ದರು. ಈ ಪ್ರಕ್ರಿಯೆಯಲ್ಲಿ ಕೊನೆಗೆ ಬಂದ ವರ್ತೂರು ಸಂತೋಷ್, ತನಿಷಾ ಮತ್ತು ಕಾರ್ತಿಕ್ ನಡುವಿನ ವಾದದಲ್ಲಿ ತನಿಷಾ ಮತ್ತು ಸಂತೋಷ್ ಮಧ್ಯೆ ಕಿಡಿ ಹೊತ್ತಿಕೊಂಡಿತು.
ಬೆಳಗ್ಗೆಯಷ್ಟೇ ತಮಾಷೆಯ ಟಾಸ್ಕ್ನಲ್ಲಿ ನಕ್ಕು ನಲಿದಿದ್ದ ಬಿಗ್ಬಾಸ್ ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿತ್ತು. ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ ಎಂದು ಬಿಗ್ಬಾಸ್ ಹೇಳಿದರು. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕುಳಿತ ಸ್ನೇಹಿತ್ ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಕನ್ವಿನ್ಸ್ ಮಾಡಲು ಪ್ರಯತ್ನಿಸಿದರು.
ವಾದದ ವೇಳೆ ತನಿಷಾ ಕಾಲಿಗೆ ಪೆಟ್ಟು ಬಿದ್ದಿದೆ, ಹಾಗಾಗಿ ಅವಳಿಗೆ ಒಂದು ವಾರ ಅವಕಾಶ ಅಗತ್ಯವಿದೆ. ನಾನು ಅವಳು ಸೇವ್ ಆಗಲಿ ಎಂದು ಬಯಸ್ತೀನಿ ಎಂದರು. ಇದಕ್ಕೆ ವಿರುದ್ಧವಾಗಿ ಮಾತನಾಡಿದ ವರ್ತೂರು ಸಂತೋಷ್, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.
ವರ್ತೂರ್ ಅವರ ಈ ಮಾತಿಗೆ ಕೇಕೆ ಹಾಕಿದ ನಮ್ರತಾಗೆ ವಿನಯ್ ಮತ್ತು ತುಕಾಲಿ ಸಂತೋಷ್ ಕೂಡ ಸಾಥ್ ನೀಡಿದರು. ಸಂತೋಷ್ ಹೇಳಿಕೆಗೆ ತಿರುಗೇಟು ಕೊಟ್ಟ ತನಿಷಾ, ‘ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಸಿಡಿಮಿಡಿಗೊಂಡರು. ಈ ಎಲ್ಲಾ ವಾದಗಳನ್ನು ಆಲಿಸಿದ ಸ್ನೇಹಿತ್ ಕಡೆಗೆ ವರ್ತೂರು ಅವರನ್ನು ಸೇವ್ ಮಾಡುವ ಮೂಲಕ ನಾಮಿನೇಷನ್ನಿಂದ ಪಾರು ಮಾಡಿದರು.