

ಮಧ್ಯಪ್ರದೇಶ: ಭಾನುವಾರ (ಡಿ.03) ನಡೆದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ ಮಧ್ಯಪ್ರದೇಶ ಸೇರಿ ಮೂರು ರಾಜ್ಯಗಳಲ್ಲಿ ಕಮಲಪಡೆ ಭರ್ಜರಿ ಗೆಲುವನ್ನು ದಾಖಲಿಸಿತು. ಈ ವೇಳೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕುದಿಯುವ ನೀರನ್ನು ಎರಚಿದ ಒಂದೇ ಕುಟುಂಬದ ನಾಲ್ವರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆದ್ದು, ಭರ್ಜರಿ ಜಯ ದಾಖಲಿಸಿರುವ ಹಿನ್ನೆಲೆಯಲ್ಲಿ ವಿಜಯಯಾತ್ರೆ ನಡೆಸಲಾಯಿತು. ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಪಠಾಣ್ ಎಂಬುವವರ ಮನೆಯ ಮೂಲಕ ಹಾದು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಖಜ್ರಾನಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಠಾಣ್ ಮೆರವಣಿಗೆಯನ್ನು ವಿರೋಧಿಸಿದ್ದರು ಹಾಗೂ ಭಾಗವಹಿಸುವವರೊಂದಿಗೆ ತೀವ್ರ ವಾಗ್ವಾದವನ್ನು ನಡೆಸಿದರು. ನಂತರ ಅವರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಪಠಾಣ್ ಪತ್ನಿ ಶಬನಂ ಅವರ ಮನೆಯ ಮೇಲ್ಛಾವಣಿಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕುದಿಯುವ ನೀರನ್ನು ಎರಚಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಘಟನೆಯ ಬೆನ್ನಲ್ಲೇ ಪಠಾಣ್, ಅವರ ಪತ್ನಿ ಮತ್ತು ಇಬ್ಬರು ಪುತ್ರರ ವಿರುದ್ಧ ಭಾರತೀಯ ದಂಡ ಸಂಹಿತೆ 294 (ಅಶ್ಲೀಲ ಕಾಯ್ದೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಅಪಾಯಕಾರಿ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಮತ್ತು 506 (ಬೆದರಿಕೆ) ಅಡಿಯಲ್ಲಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
"ಇದೇನು ದೊಡ್ಡ ವಿವಾದವಲ್ಲ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಖಜ್ರಾನಾ ಪೊಲೀಸ್ ಠಾಣೆಯ ಉಸ್ತುವಾರಿ ಉಮ್ರಾವ್ ಸಿಂಗ್ ತಿಳಿಸಿದ್ದಾರೆ,(ಏಜೆನ್ಸೀಸ್).