

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನಗಳವರೆಗೂ ಟಾಸ್ಕ್ ಹಾಗೂ ಇತರೆ ವಿಚಾರಗಳಿಗೆ ಪರಸ್ಪರ ಏರುಧ್ವನಿಯಲ್ಲಿ ಕಿತ್ತಾಡಿಕೊಂಡು, ಕಣ್ಣೀರಿಡುತ್ತಿದ್ದ ಮನೆಮಂದಿ ಇದೀಗ ತಮ್ಮ ಕುಟುಂಬದವರ ಆಗಮನ ತಿಳಿದು ಮೌನ ತಾಳಿದ್ದಾರೆ. ಹೆಚ್ಚು ಮಾತನಾಡದೆ ಪಾಜ್ ಆಗಿ, ತಮ್ಮವರನ್ನು ಕಂಡ ಕೂಡಲೇ ಪ್ರೀತಿಯಿಂದ ಕಂಬನಿ ಮಿಡಿಯುತ್ತಿದ್ದಾರೆ. ನಿನ್ನೆಯಿಂದಲೂ ಮನೆಯ ಸದಸ್ಯರ ಕುಟುಂಬದವರು ಒಬ್ಬೊಬ್ಬರೆ ಒಳಗೆ ಬರುತ್ತಿದ್ದು, ಈ ಪೈಕಿ ಮೊದಲಿಗೆ ನಮ್ರತಾ ಅವರ ತಾಯಿ ಎಂಟ್ರಿ ಕೊಟ್ಟು ಎಲ್ಲರನ್ನೂ ಮಾತನಾಡಿಸಿ, ಹೋದರು.
ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದ್ದು, ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಅಲ್ಲದೆ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆಮಂದಿ ಕಣಕ್ಕಿಳಿದಿದ್ದಾರೆ. ಇದೆಲ್ಲದರ ಮಧ್ಯೆ ಮನೆಯವರ ಆಗಮನ ಸ್ಪರ್ಧಿಗಳಿಗೆ ಅತೀವ ಸಂತಸ ಉಂಟುಮಾಡಿದ್ದು, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರ ಕುಟುಂಬದವರು ಮನೆಯೊಳಗೆ ಬಂದಿದ್ದು, ಇತರೆ ಸ್ಪರ್ಧಿಗಳನ್ನು ಮತ್ತಷ್ಟು ಭಾವುಕರನ್ನಾಗಿ ಮಾಡಿದೆ.
ಪ್ರತಿಯೊಬ್ಬ ಸ್ಪರ್ಧಿಯ ಕುಟುಂಬದವರು ಮನೆಯೊಳಗೆ ಬರುತ್ತಿದ್ದಂತೆ ಮುಖ್ಯದ್ವಾರದ ಎದುರು ಮಕ್ಕಳಂತೆ ತಮ್ಮ ಮನೆಯವರ ಆಗಮನಕ್ಕಾಗಿ ಕಾರ್ತಿಕ್ ಕಾದು ಕುಳಿತ್ತಿದ್ದರು. ಅದೇ ಸಮಯಕ್ಕೆ ಹಾಡು ಹೇಳುತ್ತ ಮನೆಗೆ ಎಂಟ್ರಿ ಕೊಟ್ಟ ಅವರ ತಾಯಿ, ಹಿಂಬದಿಯಿಂದ ಕಾರ್ತಿಕ್ನ ತಬ್ಬಿ, ಮುತ್ತು ಕೊಟ್ಟು ಸಮಾಧಾನದ ಮಾತುಗಳನ್ನು ಹೇಳಿದರು. ಈ ವೇಳೆ ಪಾಜ್ ಆಗಿದ್ದ ಕಾರ್ತಿಕ್ ಅಮ್ಮನನ್ನು ಮಾತನಾಡಿಸಲು ಆಗದೆ ಬಿಕ್ಕಿ ಬಿಕ್ಕಿ ಅತ್ತರು. ಕಡೆಗೂ ಅವರಿಗೆ ತಮ್ಮ ತಾಯಿಯನ್ನು ಒಂದು ನಿಮಿಷ ನಿಂತು ಕೂಡ ಮಾತನಾಡಿಸಲು ಅವಕಾಶ ಸಿಗದೆ ಹೋಯಿತಲ್ಲ? ಎಂಬ ಬೇಸರ ಮನೆಮಂದಿಗೆ ಕಾಡಿದೆ.
ಮುಖ್ಯದ್ವಾರದಿಂದ ಹೊರ ಹೋದ ಕಾರ್ತಿಕ್ ತಾಯಿ ಮಗನನ್ನು ಮಾತನಾಡಿಸಲು ಹಿಂತಿರುಗಿ ಬರುತ್ತಾರಾ? ಇಲ್ವಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.