

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 15ನೇ ವಾರಾಂತ್ಯವನ್ನು ತಲುಪಿದ್ದು, ಫಿನಾಲೆ ಹಂತಕ್ಕೆ ಎಂಟ್ರಿ ಕೊಡಲು ಸ್ಪರ್ಧಿಗಳ ನಡುವೆ ಭಾರೀ ಪೈಫೋಟಿಯೇ ನಡೆಯುತ್ತಿದೆ. ಫಿನಾಲೆಯ ಟಾಪ್ ಐದು ಫೈನಲಿಸ್ಟ್ ಸ್ಥಾನಕ್ಕೆ ಹೋಗಲು ಈಗಾಗಲೇ ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್ ಅವಕಾಶ ಪಡೆದಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ನಡೆದ ವಾರದ ಕಥೆ ಕಿಚ್ಚ ಜತೆ ಸಂಚಿಕೆಯಲ್ಲಿ ಸುದೀಪ್ ಫೈನಲ್ಗೆ ಪ್ರವೇಶಿಸುತ್ತಿರುವ ಮೂರನೇ ಸ್ಪರ್ಧಿ ವರ್ತೂರು ಸಂತೋಷ್ ಎಂದು ಘೋಷಿಸಿದರು.
ಇನ್ನು ನಾಮಿನೇಷನ್ ಪಟ್ಟಿಯಲ್ಲಿ ಕುಳಿತಿರುವ ಕಾರ್ತಿಕ್, ನಮ್ರತಾ, ವಿನಯ್ ಹಾಗೂ ಪ್ರತಾಪ್ ನಡುವೆ ಯಾರು ಹೊರಗೆ? ಯಾರು ಒಳಗೆ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕು. ಇದೆಲ್ಲದರ ಮಧ್ಯೆ ಸುದೀಪ್, ಇತ್ತೀಚಿನ ದಿನಗಳಲ್ಲಿ ಕಾರ್ತಿಕ್ ಒಂಟಿಯಾಗಿದ್ದಾರೆ ಅನಿಸುತ್ತಿದೆಯಾ ಎಂದು ಮನೆಮಂದಿಗೆಲ್ಲಾ ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಿದ ವಿನಯ್, ಸ್ನೇಹದಲ್ಲಿ ನಿರೀಕ್ಷೆ ಶುರುವಾದರೆ ಅದು ಸ್ನೇಹವಾಗಿ ಉಳಿಯುವುದಿಲ್ಲ ಎಂದಿದ್ದಾರೆ.
ಇನ್ನು ಸಂಗೀತಾ ಮಾತನಾಡಿ, ಯಾರಾದ್ರು ಅವರನ್ನು ನಂಬಿದ್ರೆ, ಅವರಿಗೆ ಇವರು ನಂಬಿಕೆ ದ್ರೋಹ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, ಯಾವಾಗಲೂ ನಾನೇ ಹೋಗಿ ಹೋಗಿ ಕ್ಷಮೆ ಕೇಳಿದ್ದೀನಿ, ಇನ್ನು ನನ್ನಿಂದ ಆಗುವುದಿಲ್ಲ. ಸೋತು, ಸೋತು ಸಾಕಾಗಿದೆ, ಸಾಯೋದಿಕ್ಕೆ ನಾನು ರೆಡಿಯಿಲ್ಲ. ಇವರು ನನ್ನನ್ನು ಮೆಟ್ಟಿಲಂತೆ ತುಳಿದುಕೊಂಡು ಹೋಗಿದ್ದಾರೆ ಎಂದು ಹೇಳುವ ಮೂಲಕ ತಮ್ಮೊಳಗಿದ್ದ ಬೇಸರವನ್ನು ಹೊರಹಾಕಿದ್ದಾರೆ.