

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 (BBK12) ಶುರುವಾಗಿ ಇಂದಿಗೆ ಮೂರು ವಾರಗಳು ಕಳೆದಿದ್ದು, ಮೊದಲ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರಿಗೆ ಎಷ್ಟು ಖುಷಿ ತಂದಿದೆಯೋ, ಅವರ ಬುದ್ಧಿವಂತಿಕೆ ಮಾತು ಹಾಗೂ ಹಾದಿ ತಪ್ಪಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಮ್ಮ ಶೈಲಿಯಲ್ಲೇ ಬಿಸಿ ಮುಟ್ಟಿಸುವ ಪರಿ ಅಷ್ಟೇ ಮಜಾ ನೀಡುತ್ತದೆ. ಅಂತೆಯೇ ಇದೀಗ ಫಿನಾಲೆ ವೇದಿಕೆಯಲ್ಲೂ ಕೆಲವರಿಗೆ ತಲೆ ಮೇಲೆ ತಟ್ಟಿ ಹೇಳಿರುವುದು ವೀಕ್ಷಕರ ಕುತೂಹಲವನ್ನು ದುಪ್ಪಟ್ಟಾಗಿಸಿದೆ.
ಸುಧೀ, ಅಶ್ವಿನಿ ಗೌಡ, ಮಾಳು ಮತ್ತು ರಾಶಿಕಾ ಫಿನಾಲೆ ಹಂತದಲ್ಲಿ ಸ್ಪರ್ಧಿಸಿದರೆ, ಚಂದ್ರಪ್ರಭ, ಅಶ್ವಿನಿ ಎಸ್.ಎನ್, ಕಾವ್ಯ, ಗಿಲ್ಲಿ, ಧ್ರುವಂತ್, ಧನುಷ್, ಸ್ಪಂದನ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ, ಅಭಿಷೇಕ್, ಮಲ್ಲಮ್ಮ, ಜಾಹ್ನವಿ ಮನೆಯಲ್ಲಿ ಮುಂದುವರಿದಿದ್ದಾರೆ. ಆದರೆ, ಮಿಡ್ ವೀಕ್ ಎಲಿಮಿನೇಷ್ನಲ್ಲಿ ಸತೀಶ್ ಮಾತ್ರ ಮನೆಯಿಂದ ಹೊರಬಂದಿದ್ದಾರೆ. ಈ ಮಧ್ಯೆ, 'ಬಿಗ್' ಮನೆಯಲ್ಲಿ ರಕ್ಷಿತಾ ವಿರುದ್ಧ ವ್ಯಂಗ್ಯವಾಡಿ, ನಾಲಿಗೆ ಹರಿಬಿಟ್ಟ ಅಶ್ವಿನಿ ಗೌಡ ಮತ್ತು ಜಾನ್ವಿಗೆ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಬಿಸಿ ಮುಟ್ಟಿಸಿದ್ದಾರೆ.
ಮೊದಲ ಫಿನಾಲೆ ವೇದಿಕೆಗೆ ಅದ್ಧೂರಿ ಎಂಟ್ರಿಕೊಟ್ಟಿರುವ ಸುದೀಪ್ ಅವರ ಫಸ್ಟ್ ಪ್ರೋಮೋ ಇದೀಗ ಹೊರಬಿದ್ದಿದ್ದು, ಇದರಲ್ಲಿ ಕಿಚ್ಚ ಮನೆ ಮಂದಿ ಮಾಡಿದ ತಪ್ಪು ಮತ್ತು ಅವರಲ್ಲಿ ಯಾರ ಮಾತುಗಳು ಚೌಕಟ್ಟನ್ನು ಮೀರಿ ಹೋಯಿತು ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾವು ಕೊಟ್ಟಿರುವ ಮಾತಿಗೆ ತಪ್ಪಲ್ಲ. ತಪ್ಪಾಗಿ ಆಡಿರುವ ಮಾತಿಗೆ ಬುದ್ಧಿ ಕಲಿಸದೆ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹ ಕೊಟ್ಟಿದ್ದೀವಿ. ಅದೇ ಎಲ್ಲಿದ್ದೀವಿ ಅನ್ನೋದನ್ನೇ ಮರೆತು, ಬಾಯಿಂಗೆ ಬಂದ್ಹಂಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ಧಿನು ಹೇಳಬೇಕಾಗುತ್ತದೆ" ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.
ಅಸಲಿಗೆ ಯಾರಿಗೆ ಏನು ಹೇಳಲಿದ್ದಾರೆ? ಯಾರ ಮಾತುಗಳಲ್ಲಿ ಎಷ್ಟು ತಪ್ಪಿತ್ತು ಎಂಬುದರ ಲೆಕ್ಕವನ್ನು ಹೇಗೆ ಅಳೆದು ತೂಗುತ್ತಾರೆ? ಯಾರಿಗೆಲ್ಲ ಮಾತಿನೆ ಪೆಟ್ಟು ಬೀಳಲಿದೆ ಎಂಬುದನ್ನು ಇಂದಿನ ಬಿಗ್ ಬಾಸ್ 12ರ ಮೊದಲ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.