BBK11: ತಪ್ಪು ಆಗೋಗಿದೆ! 'ಬಿಗ್'​ ಮನೆಯಲ್ಲಿ ಉಳಿಯುವ ಅವಕಾಶ ಕಳೆದುಕೊಂಡ್ರಾ ತ್ರಿವಿಕ್ರಮ್​?

ವಿಜಯವಾಣಿ - 2024-12-07T181246.502
Published on

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್ ಬಾಸ್​ ಸೀಸನ್​ 11ರಲ್ಲಿ (BBK11) ಕಳೆದ ವಾರ ವೈಲ್ಡ್​ ಕಾರ್ಡ್​ನಲ್ಲಿ ಎಂಟ್ರಿಕೊಟ್ಟಿದ್ದ ಶೋಭಾ ಶೆಟ್ಟಿ ಸ್ವಇಚ್ಛೆಯಿಂದ ಮನೆಯಿಂದ ಹೊರ ಹೋಗಿದ್ದೇ ತಡ ಬಿಗ್ ಮನೆಯ ಲೆಕ್ಕಾಚಾರಗಳು ಕೊಂಚ ತಿರುಗಿವೆ. ಈ ಮಧ್ಯೆ ವಾರ ಪೂರ ಟಾಸ್ಕ್​ಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಿದ ಸ್ಪರ್ಧಿಗಳ ತಪ್ಪು-ಸರಿಯನ್ನು ಇಂದಿನ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ಎತ್ತಿಹಿಡಿದ ನಿರೂಪಕ, ನಟ ಸುದೀಪ್​, ತ್ರಿವಿಕ್ರಮ್​ಗೆ 'ಕಿಚ್ಚಿ'ನ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಕಳೆದ ಭಾನುವಾರ ಶೋಭಾ ಶೆಟ್ಟಿ ಹೊರ ಹೋಗಿದ್ದ ವಿಚಾರವನ್ನು ಗೌತಮಿ ಜತೆ ಚರ್ಚಿಸಿದ್ದ ತ್ರಿವಿಕ್ರಮ್​, ಅವರ ಎಲಿಮಿನೇಷನ್​ ಕುರಿತು ಬಿಗ್ ಬಾಸ್​ ನಿಯಮ, ಚೌಕಟ್ಟನ್ನು ಮೀರಿ ಮಾತನಾಡಿದ್ದರು. ಇದನ್ನೇ ಪ್ರತ್ಯೇಕವಾಗಿ ಮುನ್ನೆಲೆಗೆ ತಂದ ಸುದೀಪ್​, ತ್ರಿವಿಕ್ರಮ್​ ಮಾತುಗಳಿಗೆ ಖಡಕ್​ ತಿರುಗೇಟು ನೀಡಿದ್ದಾರೆ. ಈ ವೇಳೆ ನಿಮ್ಮ ಮುಂದೆಯೇ ಅದೆಲ್ಲವೂ ಆಗಿದ್ದಲ್ಲವೇ ತ್ರಿವಿಕ್ರಮ್​ ಎಂದರೆ, ನೀವು ಕೋಪ ಮಾಡಿಕೊಳ್ಳುವುದಿಲ್ಲ ಎಂದಾದರೆ ನಾನು ಒಂದೆರೆಡು ನಿಮಿಷ ಮಾತನಾಡ್ತೀನಿ ಎಂದು ಸ್ಪರ್ಧಿ ಹೇಳಿದ್ದಾರೆ. ಇದಕ್ಕೆ ಸುದೀಪ್​, ಕೋಪ ಅನ್ನೋದು ನನಗೆ ಬಿಟ್ಟುಬಿಡಿ ನಿಮಗೆ ಬೇಡ ಎಂದು ಹೇಳಿದರು.

'ನನ್ನ ಜೀವನದಲ್ಲಿ ಯಾರೂ ನನ್ನ ಮುಂದೆ ತಲೆತಗ್ಗಿಸೋದು ಬೇಡ, ಅಂತಹ ಆಸೆ ನನಗಿಲ್ಲ ಸ್ವಾಮಿ' ಎಂದ ಕಿಚ್ಚನಿಗೆ, 'ನಾನೇನಾದರೂ ತಪ್ಪು ಮಾಡಿದ್ದೀನಿ, ಬಿಗ್ ಬಾಸ್​ಗೆ ಅಗೌರವ ತೋರಿದ್ದೀನಿ ಎಂದಾದರೆ ಈಗಲೇ ಮನೆಯಿಂದ ಹೊರಹೋಗಲು ನಾನು ರೆಡಿಯಿದ್ದೀನಿ' ಎಂದು ತ್ರಿವಿಕ್ರಮ್​ ಹೇಳಿದ್ದಾರೆ. ಇದಕ್ಕೆ ಸುದೀಪ್​ ಪ್ರತಿಕ್ರಿಯಿಸಿ, 'ತಪ್ಪಾಗಿದ್ದರೇ ಅಲ್ಲ, ತಪ್ಪಾಗಿದೆ' ಎಂದು ಖಡಕ್ ಆಗಿ ಹೇಳಿದ್ದಾರೆ. ಅಸಲಿಗೆ ಅಲ್ಲಿ ಏನಾಯಿತು? ಮುಂದೆ ನಡೆದಿದ್ದೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net