BBK11: ಕನ್ನಡದ 'ಬಿಗ್' ಇತಿಹಾಸದಲ್ಲೇ ಇದು ಮೊದಲು! ಗೆಲುವಿನಲ್ಲೇ ಹೊಸ ದಾಖಲೆ ನಿರ್ಮಿಸಿದ ಹಳ್ಳಿ ಹೈದ

ವಿಜಯವಾಣಿ - 2025-01-27T070242.971
Published on

BBK11: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಬಿಗ್ ಬಾಸ್ ಸೀಸನ್​ 11 ಇದೀಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಿನ್ನೆ (ಜ.26) ಗ್ರ್ಯಾಂಡ್ ಫಿನಾಲೆಯಲ್ಲಿ ಭರ್ಜರಿ ಪೈಪೋಟಿಯ ನಡುವೆ ಹಳ್ಳಿ ಹೈದ ಹನುಮಂತ ಲಮಾಣಿ (Hanumantha Lamani) ಸೀಸನ್​ 11ರ ಪಟ್ಟವನ್ನು ಗೆದ್ದು ಬಿಗ್ ಬಾಸ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ.

ಹನುಮಂತು ಮೋಡಿ

ಭಾನುವಾರ ಸಂಚಿಕೆಗೆ ಕಾಲಿಟ್ಟ ಐವರು ಫಿನಾಲೆ ಸ್ಪರ್ಧಿಗಳ ಮಧ್ಯೆ ಉಗ್ರಂ ಮಂಜು ಮೊದಲು ಹೊರನಡೆದರೆ, ನಂತರದಲ್ಲಿ ಮೋಕ್ಷಿತಾ ಮನೆಯಿಂದ ಹೊರಬಂದರು. ಇನ್ನು ಕಡೆಯ ಸಾಲಿನಲ್ಲಿ ಮನೆಯಿಂದ ನೇರವಾಗಿ ಫಿನಾಲೆ ವೇದಿಕೆ ಪ್ರವೇಶಿಸಿದ ರಜತ್, ತ್ರಿವಿಕ್ರಮ್ ಮತ್ತು ಹನುಮಂತು ಪೈಕಿ ರಜತ್​ ಎರಡನೇ ರನ್ನರ್ ಅಪ್​ ಆಗಿ ಮೂರನೇ ಸ್ಥಾನ ಗಳಿಸಿದರು. ಅಂತಿಮ ಸುತ್ತಿನಲ್ಲಿ ಕಿಚ್ಚ ಸುದೀಪ್ ಅವರ ಎಡ-ಬಲದಲ್ಲಿ ನಿಂತ ತ್ರಿವಿಕ್ರಮ್ ಮತ್ತು ಹನುಮಂತು ನಡುವೆ ಕೆಲ ನಿಮಿಷ ಗೆಲುವಿಗಾಗಿ ಹಪಾಹಪಿ ನಡೆಯಿತು. ಹನುಮಂತು ಕೈ ಮೇಲೆತ್ತುವ ಮೂಲಕ ಸುದೀಪ್​ ಸೀಸನ್​ 11ರ ವಿಜೇತರನ್ನು ಅಧಿಕೃತವಾಗಿ ಘೋಷಿಸಿದರು.

ಬಿಗ್ ಬಾಸ್​ 11ರ ಪಟ್ಟ ಹನುಮಂತು ಮುಡಿಗೇರಿದ್ದೇ ತಡ ಕನ್ನಡಿಗರಲ್ಲಿ ಸಂಭ್ರಮ ಮನೆ ಮಾಡಿತು. ಇದಕ್ಕೆ ಫಿನಾಲೆ ವೇದಿಕೆ ಹಾಗೂ ಜನರು ಹಾಕಿದ್ದ ಕೋಟ್ಯಂತರ ಮತಗಳೇ ಸಾಕ್ಷಿಯಾಯಿತು. ಮೊದಲ ದಿನದಿಂದ ಕೊನೆಯವರೆಗೂ ಆಟದಲ್ಲಿ ತನ್ನ ಸಾಮರ್ಥ್ಯ, ಚಾಣಕ್ಷತನ ತೋರಿದ್ದ ತ್ರಿವಿಕ್ರಮ್​ ಈ ಬಾರಿಯ ಸೀಸನ್​ ಗೆಲ್ಲಬಹುದು ಎಂದೇ ಬಿಗ್ ಮನೆಯ ಸದಸ್ಯರು ಹಾಗೂ ಬಹುತೇಕರು ಊಹಿಸಿದ್ದರು. ಆದರೆ, ಅಂತಿಮವಾಗಿ ಹನುಮಂತ ಗೆಲುವು ಸಾಧಿಸಿದ್ದು ಖುಷಿ ತಂದಿದೆ. ಕೇವಲ ಅರ್ಧ ಕೋಟಿ ರೂ. ಮತ್ತು ಅದ್ಧೂರಿ ಟ್ರೋಫಿ ಪಡೆಯದ ಹನುಮಂತು, ಕನ್ನಡದ ಬಿಗ್ ಬಾಸ್​ ಇತಿಹಾಸದಲ್ಲೇ ನೂತನ ದಾಖಲೆ ನಿರ್ಮಿಸಿರುವುದು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.

ಹಳ್ಳಿ ಹೈದ ಹೃದಯ ಕದ್ದ

ಕನ್ನಡ ಬಿಗ್ ಬಾಸ್​ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವ ಸೀಸನ್​ನಲ್ಲಿಯೂ ಯಾವ ವಿನ್ನರ್​ಗೂ ದೊರೆಯದ ಮತಗಳು ಈ ಬಾರಿ ಹನುಮಂತುಗೆ ಲಭಿಸಿದೆ. ಬರೋಬ್ಬರಿ 5 ಕೋಟಿ 23 ಲಕ್ಷದ 89 ಸಾವಿರದ 318 ಮತಗಳಿಂದ ಭರ್ಜರಿ ಜಯ ಸಾಧಿಸಿರುವ ಹನುಮಂತು, ತಮ್ಮ ಪ್ರತಿಸ್ಪರ್ಧಿಯಾದ ತ್ರಿವಿಕ್ರಮ್​ರನ್ನು ಸುಮಾರು 3 ಕೋಟಿ ಮತಗಳ ಅಂತರದಲ್ಲಿ ಹಿಂದಿಕ್ಕಿರುವುದು ಗಮನಾರ್ಹ. ಇದರೊಟ್ಟಿಗೆ ವಿಶೇಷ ಎಂದರೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿಕೊಟ್ಟ ಹಳ್ಳಿ ಹೈದ ಹನುಮಂತ, ಫಿನಾಲೆ ಮಟ್ಟಕ್ಕೆ ಬಂದು, ಘಟಾನುಘಟಿ ಸ್ಪರ್ಧಿಗಳ ಮಧ್ಯೆ ಭರ್ಜರಿ ಗೆಲುವು ಸಾಧಿಸಿರುವುದು ಇದೀಗ ವೀಕ್ಷಕರಲ್ಲಿ ಅತೀವ ಸಂತಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net