

ಬೆಂಗಳೂರು: ನಿನ್ನೆ ರಾತ್ರಿ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಹೆಗ್ಗನಹಳ್ಳಿ ನಿವಾಸಿ ಪವನ್ (21) ಮೃತ ದುರ್ದೈವಿ. ಎಎಸ್ಸಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ. ಇದೊಂದು ವರ್ಷ ಕಳೆದಿದ್ದೆ ಪದವಿ ಮುಗಿಸುತ್ತಿದ್ದ. ನಿನ್ನೆ(ಬುಧವಾರ) ಸಂಜೆ ಕಾಲೇಜಿನಿಂದ ಹೆಗ್ಗನಹಳ್ಳಿ ಮನೆಗೆ ಹೋಗಿದ್ದ. ಬಳಿಕ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಹ್ಮಣ್ಯನಗರ ಮಿಲ್ಕ್ ಕಾಲನಿ ಬಳಿ ತೆರಳಿದ್ದ. ಸುಮಾರು 11 ಗಂಟೆ ಸಮಯದಲ್ಲಿ ಮಿಲ್ಕ್ ಕಾಲನಿ ಮೈದಾನ ಸಮೀಪದ ಕಟ್ಟಡವೊಂದರ ಮೇಲಿಂದ ಬಿದ್ದು ಪವನ್ ಮೃತಪಟ್ಟಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಗ್ಗನಹಳ್ಳಿಯಿಂದ ಪವನ್ ಇಲ್ಲಿಗೆ ಯಾಕೆ ಬಂದ? ಪರಿಚಯ ಇಲ್ಲದೇ ಇರೋ ಈ ಬಿಲ್ಡಿಂಗ್ ಮೇಲಿಂದ ಬಿದ್ದಿದ್ಯಾಕೆ? ಜೊತೇಲಿ ಯಾರಾದ್ರು ಬಂದು ತಳ್ಳಿದ್ರಾ? ಅಥವಾ ಆತನೇ ಮೇಲಿಂದ ಬಿದ್ನಾ? ಪವನ್ ಯಾರೊಂದಿಗೆ ಬಂದಿದ್ದ, ಕಟ್ಟಡದ ಮೇಲೆ ಏಕೆ ಹೋಗಿದ್ದ? ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಯುವಕ ಮಿಥುನ್, ರಾತ್ರಿ 10.30ರ ಸುಮಾರಿಗೆ ಏನೋ ಶಬ್ದ ಬಂತು ಅಂತಾ ನಮ್ ಅಮ್ಮ ಹೇಳಿದ್ರು. ಗಾಡಿ ಏನಾದ್ರು ಬಿದ್ದಿದ್ಯಾ ಅಂತಾ ನೋಡಿದೆ. ಆದ್ರೆ ಏನೂ ಇರಲಿಲ್ಲ. 11 ಗಂಟೆಗೆ ಮತ್ತೆ ಶಬ್ದ ಬಂತು. ಯಾರೋ ಅಳುತ್ತಿರುವ ಶಬ್ದ ಕೇಳಿಸಿತು. ಬಂದು ನೋಡಿದ್ರೆ ಒಂದು ಬಾಡಿ ಬಿದ್ದಿತ್ತು. ಒಂದು ಕಾಲು ಪೂರ್ತಿ ಗಾಯ ಆಗಿತ್ತು. ತಲೆಗೆ ಗಾಯ ಆಗಿತ್ತು. ಆಮೇಲೆ ಪೊಲೀಸರು ಬಂದ್ರು. ಕೆಲವರು ಹೇಳ್ತಾರೆ ಮೇಲಿಂದ ಬಿದ್ದ ಅಂತಾ. ಆದ್ರೆ ಇಲ್ಲಿ ಅಷ್ಟೊಂದು ರಕ್ತ ಇರಲಿಲ್ಲ. ಆತ ಈ ಏರಿಯಾದವ ಅಲ್ಲ. ಬೇರೆ ಎಲ್ಲಿಂದಾನೋ ಬಂದಿದ್ದ ಅನ್ಸುತ್ತೆ ಎಂದಿದ್ದಾರೆ.