

ಹಾಸನ: ನಗರದ ಕುವೆಂಪುನಗರ ಬಡಾವಣೆಯ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಕಳೆದ ಸೋಮವಾರ ಸಂಜೆ ನಡೆದಿದ್ದ ಮಿಕ್ಸರ್ ಗ್ರೈಂಡರ್ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಚ್ಛೇದಿತ ಮಹಿಳೆ ಮೇಲಿನ ಪ್ರೀತಿಗಾಗಿ ಹಾಗೂ ಆಕೆಯಿಂದಾದ ಮೋಸಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪಾಗಲ್ ಪ್ರೇಮಿಯೊಬ್ಬ ಮಾಡಿದ ಅವಾಂತರಕ್ಕೆ ಅಮಾಯಕ ಕುಟುಂಬ ಕಣ್ಣೀರು ಹಾಕುತ್ತಿದೆ. ಪಾಗಲ್ ಪ್ರೇಮಿ ಮತ್ತು ಆತನನ್ನು ವಂಚಿಸಿದ್ದ ಮಹಿಳೆ ಇಬ್ಬರೂ ಈಗ ಪೊಲೀಸರ ವಶದಲ್ಲಿದ್ದಾರೆ.
ವಿಚ್ಛೇದಿತ ಮಹಿಳೆ ಕೇಂದ್ರಬಿಂದು: ಹಾಸನದ ಕುವೆಂಪುನಗರ ಬಡಾವಣೆಯ 41 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆ ಈ ದುರಂತ ಪ್ರಕರಣದ ಕೇಂದ್ರಬಿಂದು. ಈಕೆ ವರಾನ್ವೇಷಣೆಗಾಗಿ ಮ್ಯಾಟ್ರಿಮೋನಿ ವೆಬ್ಸೈಟ್ವೊಂದರಲ್ಲಿ ತನ್ನ ಫೋಟೊ ಮತ್ತು ವಿವರ ಪ್ರಕಟಿಸಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಅನೂಪ್ಕುಮಾರ್, ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಈ ಪ್ರಸ್ತಾಪಕ್ಕೆ ಮೊದಲು ಒಪ್ಪಿಗೆ ಸೂಚಿಸಿ ಆತನೊಂದಿಗೆ ಕೆಲ ದಿನಗಳ ಕಾಲ ಪ್ರೀತಿಯಿಂದ ಓಡಾಡಿದ್ದಳು.
ವಿವಿಧ ಕಾರಣ ಹೇಳಿಕೊಂಡು ಅನೂಪ್ ಕುಮಾರ್ನಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅನೂಪ್ನ ಪ್ರೀತಿ ಮತ್ತು ಮದುವೆ ಪ್ರಸ್ತಾಪ ನಿರಾಕರಿಸಿ ದೂರವಾಗಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ಹತಾಶೆಗೆ ಒಳಗಾದ ಅನೂಪ್ಕುಮಾರ್, ತಾನು ಕೊಟ್ಟಿದ್ದ ಹಣ ವಾಪಸ್ ಕೇಳಿದಾಗ ಮಹಿಳೆ ಏನೇನೊ ನೆಪ ಹೇಳಿ ನುಣಚಿಕೊಂಡಿದ್ದಳು. ಈ ನಡುವೆ ಹಾಸನಕ್ಕೂ ಬಂದ ಅನೂಪ್ ಕುಮಾರ್, ಮಹಿಳೆಯ ಮನೆ ಎದುರು ಗಲಾಟೆ ಮಾಡಿದ್ದ. ಆತನ ವಿರುದ್ಧ ಪೊಲೀಸ್ ಠಾಣೆ ಮತ್ತು ರಾಜ್ಯ ಮಹಿಳಾ ಆಯೋಗಕ್ಕೂ ಮಹಿಳೆ ದೂರು ನೀಡಿದ್ದಳು. ಇದು ಅನೂಪ್ನನ್ನು ಮತ್ತಷ್ಟು ಕೆರಳಿಸಿತ್ತು. ತನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿದ.
ವಿಚ್ಛೇದಿತ ಮಹಿಳೆಗೆ ಮೊದಲು ಸೀರೆ ಕೊರಿಯರ್ ಮಾಡಿದ ಅನೂಪ್, ಎರಡನೇ ಬಾರಿ ಎಲ್ಇಡಿ ಬಲ್ಬ್ಗಳ ಸೀರಿಯಲ್ ಸೆಟ್ ಕಳುಹಿಸಿದ್ದ. ಪಾರ್ಸೆಲ್ನಲ್ಲಿ ವಸ್ತುಗಳ ಜತೆಗೆ ಹಣವನ್ನೂ ಇಟ್ಟು ಕಳುಹಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೂರನೇ ಬಾರಿಗೆ ಮಿಕ್ಸರ್ ಗ್ರೈಂಡರ್ನಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ. ಆಕೆ ಸಾಯಬೇಕು, ಇಲ್ಲವೇ ಆಕೆಯ ಸೌಂದರ್ಯ ವಿರೂಪಗೊಳ್ಳಬೇಕು ಎಂಬುದು ಆತನ ಉದ್ದೇಶವಾಗಿತ್ತು.
ಬೆಂಗಳೂರಿನ ಪೀಣ್ಯ ಶಾಖೆ ನಾಗಸಂದ್ರದಿಂದ ಕಳುಹಿಸಿದವರ ವಿಳಾಸ ಇಲ್ಲದ ರೊಸಾರಿಯೊ ಗ್ರೈಂಡರ್ ಹೆಸರಿನ ಮಿಕ್ಸರ್ ಗ್ರೈಂಡರ್ ಬಾಕ್ಸ್ ಹಾಸನದ ಮಹಿಳೆಯ ಮನೆ ವಿಳಾಸ ಹೊತ್ತು ಡಿ.17ರಂದು ಹಾಸನದ ಡಿಟಿಡಿಸಿ ಅಂಗಡಿಗೆ ಬಂದಿದ್ದು, ಅದೇ ದಿನ ಡೆಲಿವರಿ ಬಾಯ್ ಮಹಿಳೆಯ ಮನೆಗೆ ಕೊಟ್ಟು ಬಂದಿದ್ದ.
ವಿಡಿಯೋ ಮಾಡಿಕೊಂಡಿದ್ದಳು: ಕಳುಹಿಸಿರುವವರ ವಿಳಾಸ ಇಲ್ಲದೆ ಬಂದಿದ್ದ ಮೊದಲ ಎರಡು ಪಾರ್ಸೆಲ್ಗಳನ್ನು ಸ್ವೀಕರಿಸಿದ್ದ ಮಹಿಳೆ ಅವುಗಳನ್ನು ತೆರೆಯುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು. ಅದೇ ರೀತಿ ಮೂರನೇ ಬಾರಿ ಬಂದಿದ್ದ ಮಿಕ್ಸರ್ ಗ್ರೈಂಡರ್ ಬಾಕ್ಸ್ ತೆರೆದು ವಿಡಿಯೋ ಮಾಡಿಕೊಂಡಿದ್ದಳು. ಆದರೆ ಮಿಕ್ಸರ್ ಗ್ರೈಂಡರ್ ಬಳಸುವ ಸಾಹಸಕ್ಕೆ ಹೋಗಿರಲಿಲ್ಲ. ಒಂದು ವಾರ ಮಿಕ್ಸರ್ ಗ್ರೈಂಡರ್ರನ್ನು ಬಾಕ್ಸ್ ಸಹಿತ ಹಾಗೇ ಇಟ್ಟಿದ್ದ ಮಹಿಳೆಯು ಡಿ.26ರಂದು ಡಿಟಿಡಿಸಿ ಕೊರಿಯರ್ ಅಂಗಡಿಗೆ ಬಂದು "ಈ ಕೊರಿಯರ್ ನನಗೆ ಬೇಡ ವಾಪಸ್ ಕಳುಹಿಸಿ'' ಎಂದು ಹಿಂದಿರುಗಿಸಿದ್ದಳು. ವಾಪಸ್ ಕಳುಹಿಸಲು 300 ರೂ. ಶುಲ್ಕ ಕೇಳಿದ್ದಕ್ಕೆ, "ನನ್ನ ಬಳಿ ಹಣ ಇಲ್ಲ, ಏನಾದರೂ ಮಾಡಿಕೊಳ್ಳಿ'' ಎಂದು ಮಿಕ್ಸಿಯನ್ನು ಅಲ್ಲೇ ಬಿಟ್ಟು ಹೋಗಿದ್ದಳು.
ಶಶಿಯ ದುರಂತ: ತುಂಬು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ತರಾತುರಿಯಲ್ಲಿದ್ದ ಕೊರಿಯರ್ ಅಂಗಡಿ ಮಾಲೀಕ ಶಶಿಕುಮಾರ್, ಕೊರಿಯರ್ ಬಾಕ್ಸ್ ಎತ್ತಿಡಲು ಹೋದಾಗ ಬಾಕ್ಸ್ ಮೊದಲೇ ತೆರೆದಿದ್ದ ಕಾರಣ ಮಿಕ್ಸರ್ ಗ್ರೈಂಡರ್ ಜಾರಿ ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಇದರಿಂದ ಶಶಿಕುಮಾರ್ನ ಬಲಗೈನ ಎರಡು ಬೆರಳುಗಳು ಸಂಪೂರ್ಣ ಪುಡಿ ಆಗಿವೆ. ಯಾರದೋ ತಪ್ಪು, ಯಾರದೋ ದ್ವೇಷಕ್ಕೆ ಅಮಾಯಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
"ವಯಸ್ಸಾದ ತಂದೆ ಅನಾರೋಗ್ಯದಿಂದ ಮನೆಯಲ್ಲಿ ನರಳುತ್ತಿದ್ದಾರೆ. ಪತ್ನಿ ಮಂಗಳವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅವುಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕೊರಿಯರ್ ಅಂಗಡಿಗೆ ಹಾಕಿದ್ದ ಲಕ್ಷಾಂತರ ರೂ. ಬಂಡವಾಳ ಹಾಳಾಗಿದೆ. ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ನನಗೆ ನ್ಯಾಯ ಕೊಡುವವರು ಯಾರು?'' ಎಂದು ಶಶಿಕುಮಾರ್ ಕಣ್ಣೀರಿಟ್ಟಿದ್ದಾರೆ.