ವಿರಾಮದ ಬಳಿಕ ಮತ್ತೆ ಕದನ

HDK DKS Siddaramaiah
Published on

ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಎದುರಿರುವ ಸಂದರ್ಭದಲ್ಲಿ ಚನ್ನಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಂತರ ಜನಸಂಪರ್ಕ ಸಭೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಜನತಾದರ್ಶನ ಮಾಡಿ ಅಬ್ಬರಿಸಿದ್ದಾರೆ. ಈ ನಡುವೆ ಕೇಂದ್ರ ಸಚಿವರ ಜನತಾದರ್ಶನಕ್ಕೆ ಅಧಿಕಾರಿಗಳ ಹಾಜರಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಿಎಂ, ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವರು ಶುಕ್ರವಾರ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಜನತಾದರ್ಶನಕ್ಕೆ ಅಧಿಕಾರಿಗಳು ಪಾಲ್ಗೊಳ್ಳಬಾರದೆಂದು ಸಂಪುಟ ಸಭೆಯಲ್ಲಿ ಚರ್ಚೆಯಲ್ಲಿ ನಿರ್ದೇಶನ ನೀಡಲಾಗಿತ್ತೆನ್ನಲಾಗುತ್ತಿದೆ, ನಿಜವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಿಂದೆ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿದ್ದಾಗ ಪ್ರಗತಿ ಪರಿಶೀಲನೆ ಸಭೆ ಮಾಡಬಾರದೆಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತಲ್ಲವೇ, ಅಂದು ಆಗದ್ದು ಇಂದು ಆಗುತ್ತಾ? ಅಂದು ಏನಿದೆಯೋ ಇಂದೂ ಅದೇ ಅದೇ ಆಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಅದರ ಬಗ್ಗೆ ತಮಗೇನು ಗೊತ್ತೇ ಇಲ್ಲ ಎಂದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕೇಂದ್ರ ಸಚಿವ ಹಾಗು ಸಂಸದ ಸಭೆ ಕರೆದರೆ ಅಧಿಕಾರಿಗಳು ಹೋಗಬೇಕಾಗುತ್ತದೆ. ಅಧಿಕಾರಿಗಳು ಹೋಗದಿರುವುದು ತಪ್ಪಾಗುತ್ತದೆ. ಬೆಳಗಾಬಿ ಎಂಪಿ ಜಗದೀಶ್ ಶೆಟ್ಟರ್ ಸಭೆ ಕರೆದಾಗ ಡಿಸಿ, ಎಸ್‌ಪಿ ಅಧಿಕಾರಿಗಳು ಹೋಗಿದ್ದರು. ಮಂಡ್ಯದಲ್ಲಿ ಯಾಕೆ ಅಧಿಕಾರಿಗಳು ಯಾಕೆ ಹೋಗಿಲ್ಲ ಎಂದು ಗೊತ್ತಿಲ್ಲ, ಯಾರು ಆದೇಶ ಮಾಡಿದ್ದಾರೆ ಎಂದೂ ಗೊತ್ತಿಲ್ಲ. ಅಧಿಕಾರಿಗಳು ಗೈರಾಗುವುದು ತಪ್ಪು ಎಂದು ಪ್ರತಿಪಾದಿಸಿದರು.

ಒಟ್ಟಾರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರು ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ಲಿತಾಂಶದ ಬಳಿಕ ತಣ್ಣಗಾಗಿತ್ತು. ಕದನ ವಿರಾಮದಂತೆಯೂ ಕಾಣಿಸಿತ್ತು. ಆದರೀಗ ಪುನಃ ಆಂತರ್ಯುದ್ಧ ಶುರುವಾದಂತೆ ಕಾಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net