Basnagowda patil yatnal- Bjp

Basangouda PatilYatnal
Published on

ಶಿವಾನಂದ ತಗಡೂರು, ಬೆಂಗಳೂರು:

ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಯತ್ನಾಳ್ ಅವರನ್ನು ಇನ್ನು ಏನು ಮಾಡಲಾಗದು ಎನ್ನುವ ಮಾತುಗಳು ಪಕ್ಷದೊಳಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿಯೇ ಹೈಕಮಾಂಡ್ ಉಚ್ಛಾಟನೆ ಅಸವನ್ನು ಝಳಪಿಸಿದೆ.

ಪರಿಣಾಮವಾಗಿ ಬಿಜೆಪಿಯೊಳಗೆ ಭಿನ್ನ ನಡೆಯೇ ಸರಿ ಎಂದು ಪರ್ಯಾಯ ದಾರಿ ಹುಡುಕಿಕೊಂಡು ಹೊರಟಿದ್ದವರ ಮುಂದೆ ದಿಢೀರ್ ಕಗ್ಗತ್ತಲು ಕವಿದಿದೆ.

ಯತ್ನಾಳ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಸಾಕಷ್ಟು ಅವಕಾಶಗಳನ್ನು ಹೈಕಮಾಂಡ್ ಕಲ್ಪಿಸಿಕೊಟ್ಟಿತ್ತು. ತಪ್ಪುಗಳನ್ನು ತಿದ್ದಿಕೊಳ್ಳಲು ಧೀರ್ಘಾವಧಿ ಅವಕಾಶಗಳಿದ್ದವು. ಆದರೆ, ಅವರು ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಟೀಕಿಸುವುದನ್ನು ಬಿಟ್ಟು ಹೊರಬರಲೇ ಇಲ್ಲ. ಪಕ್ಷದ ನಿರ್ಧಾರಗಳ ವಿರುದ್ದವೇ ಧ್ವನಿ ಎತ್ತುತ್ತಿದ್ದದ್ದು ಮಾತ್ರವಲ್ಲ, ನಾಯಕರುಗಳನ್ನು ಟೀಕಿಸಿ ಇರುಸು ಮುರುಸು ಉಂಟು ಮಾಡುವುದೇ ಅವರ ಹವ್ಯಾಸವಾಗಿ ಹೋಗಿತ್ತು. ಯಡಿಯೂರಪ್ಪ ಸಿಎಂ ಹುದ್ದೆಯ ಕೆಳಗಿಳಿಯುವ ತನಕವೂ ಕಾಡಿದ ಯತ್ನಾಳ್, ಮುಂದೆಯೂ ಅದನ್ನು ಬಿಡಲೇ ಇಲ್ಲ. ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿದ ಸುದ್ದಿ ಹೊರಬಿದ್ದ ದಿನದಿಂದಲೂ ಅವರನ್ನು ಟೀಕಿಸುವುದೇ ಯತ್ನಾಳ್ ಅವರ ಖಯಾಲಿಯಾಗಿ ಹೋಗಿತ್ತು. ಹಾಗಾಗಿಯೇ ಪಕ್ಷದ ಹಿತ ದೃಷ್ಟಿಯಿಂದ ಉಚ್ಛಾಟನೆ ಅನಿವಾರ್ಯ ಎನ್ನುವ ಅಭಿಪ್ರಾಯಗಳೇ ಪಕ್ಷದೊಳಗೆ ದಟ್ಟವಾಗಿದ್ದವು. ಈ ಅಭಿಪ್ರಾಯಕ್ಕೆ ಹೈಕಮಾಂಡ್ ತಡವಾಗಿ ಮಣೆ ಹಾಕಿದೆ ಅಷ್ಟೆ.

ಹಾಗೆ ನೋಡಿದರೆ, ನೇರ ನಡೆ ನುಡಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೊಂದಾಣಿಕೆ ಸ್ವಭಾವ ಕಡಿಮೆ ಎನ್ನುವುದು ಹಲವು ಪ್ರಕರಣಗಳಲ್ಲಿ ರುಜುವಾತಾಗುತ್ತಲೇ ಇತ್ತು. ಎತ್ತರಕ್ಕೆ ಬೆಳೆದ ನಾಯಕರಾದರೂ, ಪಕ್ಷದೊಳಗೂ ಎಲ್ಲರೊಳಗೊಂದಾಗಿ ಹೆಜ್ಜೆ ಇಡುವ ಲಯವನ್ನು ಅವರು ಕಂಡುಕೊಳ್ಳಲೇ ಇಲ್ಲ. ಬದಲಿಗೆ ಟೀಕೆ ಮಾಡುತ್ತಲೇ ನಾಯಕನ ಪಟ್ಟು ಉಳಿಸಿಕೊಳ್ಳಬಹುದು ಎನ್ನುವ ಉಮೇದಿಗೆ ಬಿದ್ದಿದ್ದು ವಿಪರ್ಯಾಸ.

ಹಿಂದೂ ಹುಲಿ, ಬಿಜೆಪಿ ೈರ್ ಬ್ರಾಂಡ್ ಎಂದೆಲ್ಲ ಕರೆಸಿಕೊಂಡ ಯತ್ನಾಳ್, ಪಕ್ಷದೊಳಗೆ ಜವಬ್ದಾರಿಯಿಂದ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟಿದ್ದರೆ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗಮನಸೆಳೆಯುವ ಅವಕಾಶವೂ ದಟ್ಟವಾಗಿತ್ತು.

ಬಿಜೆಪಿಗೆ ಮರಳಿ ಕರೆತಂದ ಯಡಿಯೂರಪ್ಪ ಅವರ ಜೊತೆಯಲ್ಲಿ ವಿಶ್ವಾಸದ ಹೆಜ್ಜೆ ಇಟ್ಟಿದ್ದರೂ ಅವರ ಭವಿಷ್ಯ ಉಜ್ವಲವಾಗುತ್ತಿತ್ತು ಎನ್ನುವ ಅಭಿಪ್ರಾಯಗಳು ಪಕ್ಷದೊಳಗೆ ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಯತ್ನಾಳ್ ಎಂದೂ ಲಕ್ಷ್ಯ ಕೊಡಲೇ ಇಲ್ಲ. ಬದಲಿಗೆ ತಾನು ನಡೆದಿದ್ದೆ ಹಾದಿ ಎಂದು ನಾಲಿಗೆಗೆ ಇನ್ನಷ್ಟು ಶಕ್ತಿ ತುಂಬುತ್ತಾ ಹೋಗಿದ್ದು ಅವರಿಗೆ ದುಬಾರಿ ಬೆಲೆ ತೆರುವಂತೆ ಮಾಡಿದೆ.

ಯತ್ನಾಳ್‌ಗೆ ಉಚ್ಛಾಟನೆ ಹೊಸದೇನಲ್ಲ. ಆದರೆ, ಪಕ್ಷದೊಳಗೆ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿ, ವರಿಷ್ಠರ ವಿಶ್ವಾಸ ಗಳಿಸುವ ಬದಲು, ಟೀಕೆಯನ್ನೆ ಬ್ರಹ್ಮಾಸವನ್ನಾಗಿಸಿಕೊಂಡು, ನಿರ್ಣಾಯಕ ಹಂತದಲ್ಲಿ ತಪ್ಪು ನಿರ್ಣಯಗಳನ್ನು ತೆಗೆದುಕೊಂಡಿದ್ದು ಅವರ ಸುಧೀರ್ಘವಾದ ರಾಜಕೀಯ ನಡೆಗೆ ಹಿಡಿದ ಕನ್ನಡಿ.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಅದೃಷ್ಟ ಖುಲಾಯಿಸಬಹುದು ಎಂದು ಲೆಕ್ಕಾ ಹಾಕಿದ್ದು ಪಕ್ಕಾ ಆಗಲೇ ಇಲ್ಲ. ಬಿಜೆಪಿ ಅಧ್ಯಕ್ಷ ಹುದ್ದೆ ಸಿಗಬಹುದು ಎಂದು ನಂಬಿಕೊಂಡು ಕಾಯ್ದಿದ್ದು ನಿಜವಾಗಲಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ ಅದು ಎಟಕಲಿಲ್ಲ. ಹೀಗೆಯೇ ಎಲ್ಲವೂ ಕೈಕೊಂಡುತ್ತಾ ಹೋದಂತೆ ಯತ್ನಾಳ್ ಅವರ ಅಸಹನೆಯೂ ಹೆಚ್ಚುತ್ತಾ ಹೋಗಿತ್ತು. ಯಾರು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಕೊನೆ ಅವರು ನಂಬಿದ್ದ ನಾಯಕರ ಬಳಿಯೂ ‘ಸಂತೋಷ’ ಸಿಗಲೇ ಇಲ್ಲ.

ದೆಹಲಿ ವರಿಷ್ಠರಿಂದ ಬದಲಾವಣೆಯ ಸಿಹಿ ಸುದ್ದಿ ಬಂದೇ ಬರಲಿದೆ ಎಂದು ನಂಬಿಕೊಂಡೇ ಭಿನ್ನರ ಪಡೆಯನ್ನು ಮುನ್ನೆಡೆಸುತ್ತಿದ್ದ ಯತ್ನಾಳ್ ಅವರಿಗೆ ಉಚ್ಛಾಟನೆ ಬರಸಿಡಿಲು ಬಂದೆರಗಿದೆ. ಅವರನ್ನು ನಂಬಿ ಹೊರಟ ಪಡೆಗೆ ಮುಂದೇನು ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

ಸದ್ಯಕ್ಕೆ ಅವರು ಜೆಡಿಎಸ್ ಅಥವಾ ಕಾಂಗ್ರೆಸ್‌ಗೆ ಹೋಗುವಂತ ವಾತಾರವಣವೂ ಇಲ್ಲ. ಅವರು ಬರಲಿ ಎಂದು ಸ್ವಾಗತಿಸುವ ಸ್ಥಿತಿ ಎರಡೂ ಪಕ್ಷದಲ್ಲಿ ಕಾಣುತ್ತಿಲ್ಲ. ಪ್ರಾದೇಶಿಕ ಪಕ್ಷ ಕಟ್ಟೋಣ ಎಂದು ಮನಸ್ಸು ಮಾಡುತ್ತಾರೋ ಅಥವಾ ಇರುವ ಪಕ್ಷದೊಳಗೆ ಹೊಂದಾಣಿಕೆ ರಾಜಕಾರಣಕ್ಕೆ ಹಿಂದಡಿ ಇಡುತ್ತಾರೋ ಕಾದು ನೋಡಬೇಕು.

ಕಾಯ್ದು ಸುಾರಿ ಮಾಡಿದ ಹೈಕಮಾಂಡ್ ನಡೆಗೆ ಕಮಲ ಪಡೆಯ ರಾಜ್ಯ ನಾಯಕರು ಬೆಚ್ಚಿಬಿದ್ದಿರುವುದಂತೂ ನಿಜ. ಇನ್ನಾದರೂ ಬಿಜೆಪಿ ಸರಿದಾರಿಗೆ ಬರುವುದೊ? ಕಾದು ನೋಡಬೇಕು. ಈ ನಿಟ್ಟಿನಲ್ಲಿ ಅಧ್ಯಕ್ಷ ಹುದ್ದೆಯಲ್ಲಿದ್ದು, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ವಿಜಯೇಂದ್ರ ಅವರ ಮೇಲಿದೆ.

ಬಿಜೆಪಿ ಹೈಕಮಾಂಡ್ ತಡವಾಗಿಯಾದರೂ, ಯತ್ನಾಳ್ ಮೇಲೆ ಝಳಪಿಸಿರುವ ಉಚ್ಛಾಟನೆ ಅಸ, ಪಕ್ಷದೊಳಗಿದ್ದು ಎಲ್ಲೆ ಮೀರುವವರಿಗೆ ಹತ್ತು ಹಲವು ಪಾಠ ಕಲಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದು ನಿಜ ಕೂಡ. ಉಚ್ಛಾನೆಯ ಅಸ ಮತ್ಯಾರ ಮೇಲೆ? ಎನ್ನುವ ಕುತೂಹಲದ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ಬಿರುಸಾಗಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net