

ಇತ್ತ ಅಕ್ಕಮಹಾದೇವಿಯು ಭವಿಯ ಸಂಗವನ್ನು ತೊರೆದಿದ್ದಾಳೆ. ಅವಳು ಲಿಂಗಸಂಗದಲ್ಲಿಯೇ ಅವಿರಳಸಂಗಿಯಾಗಿದ್ದಾಳೆ. ಹದಿನಾರುವರ್ಷದ ಅಕ್ಕ ಶಿವನಲ್ಲಿಯೇ ಪರವಶಳಾಗಿದ್ದಾಳೆ. ಲೋಕದ ಸಮಸ್ತಸಂಗವನ್ನು ಪರಿತ್ಯಾಗ ಮಾಡಿದ್ದಾಳೆ. ಆಕೆಯು ದಿಗಂಬರದ ಉಡುಗೆಯನ್ನು ಉಟ್ಟಿದ್ದಾಳೆ. ಅವಳ ಕೇಶರಾಶಿಯು ಮೈಯನ್ನು ಆವರಿಸಿಕೊಂಡಿದೆ. ಅವಳ ಕೈಯಲ್ಲಿ ಇಷ್ಟಲಿಂಗವಿದ್ದು ತನ್ನ ದೃಷ್ಟಿಯನ್ನು ಅದರಲ್ಲಿಯೇ ನೆಲೆನಿಲ್ಲಿಸಿದ್ದಾಳೆ. ಅವಳ ಮನಸ್ಸು ಲಿಂಗಸಂಗಿಯಾಗಿದೆ. ಚೆನ್ನಮಲ್ಲಿಕಾರ್ಜುನನ ವಿಕಳಾವಸ್ಥೆಯಲ್ಲಿ ತನ್ನನ್ನು ತಾನೇ ಮರೆತಿದ್ದಾಳೆ. ಇತರ ಎಲ್ಲಾ ವಿಷಯ ಸುಖಗಳನ್ನು ಹರಿದುಕೊಂಡಿದ್ದಾಳೆ. ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದು ಮುಟ್ಟಿದ್ದಾಳೆ. ಆಕೆಯು ಲಿಂಗಸಂಗಿಯಾಗಿ ಬರುತ್ತಿರುವುದು ಬಸವಣ್ಣನಿಗೆ ಅಂತಮುಖದಲ್ಲಿಯೇ ಗೋಚರವಾಗುತ್ತಿದೆ.
ಅನುಭವಮಂಟಪದ ಮಹಾನುಭಾವಗೋಷ್ಠಿಯಲ್ಲಿದ್ದ ಕಿನ್ನರಿ ಬೊಮ್ಮಯ್ಯನು ಅಕ್ಕನ ನಿಜಾವಸ್ಥೆ ತಿಳಿಯಲು ಬಂದಿದ್ದಾನೆ. ಅವನು ಅಕ್ಕನನ್ನು ಕಂಡನು. ಆಕೆಯ ಅಂತರಂಗದ ಜ್ಞಾನಾಗ್ನಿಯಲ್ಲಿ ಕಾಮನನ್ನು ಸುಟ್ಟು ಭಸ್ಮವಾಗಿದ್ದುದು ಕಿನ್ನರಿ ಬೊಮ್ಮಯ್ಯನಿಗೆ ಗೊತ್ತಾಯಿತು. ಅವನು ಬೆರಗುಗೊಂಡನು. ಅಕ್ಕನ ನಿಜಾವಸ್ಥೆಯು ಅವನ ಗಮನಕ್ಕೆ ಬಂದಿತು. ಆಗ ಅಕ್ಕ ಕಿನ್ನರಿಬೊಮ್ಮಯ್ಯನನ್ನು ಕುರಿತು ಹೀಗೆಂದಳು: ನೋಡುವ ಕಂಗಳಿಗೆ ರೂಪಿಂಬಾಗಿರಲು/ನೀವು ಮನ ನಾಚೆ ಬಂದಿರಣ್ಣಾ!/ಕೇಳಿದ ಶ್ರೋತ್ರ ಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!/ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!/ಮೂತ್ರವು ಬಿಂದು ಒಸರುವ ನಾಳವೆಂದು/ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ/ ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ/ಹೋಗಲಾಡಿಕೊಂಡು ಇದಾವ/ ಕಾರಣವೆಂದರಿಯದೆ/ನೀವು ನರಕ ಹೇತುವೆಂದು ಮನಹೇಸದೆ ಬಂದಿರಣ್ಣ/ ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ/ ಸಹೋದರ, ಛೀ ಹೋಗಾ ಮರುಳೆ! (ಶಿವ.ಪ್ರ.ಶೂ.ಸಂ.ಪುಟ 160)
ಅಕ್ಕನ ಈ ವಚನವು ಹಲವು ದೃಷ್ಟಿಗಳಿಂದ ಮುಖ್ಯವಾದದ್ದು. ಇಲ್ಲಿ ಅಕ್ಕನ ಆಧ್ಯಾತ್ಮಿಕ ಎತ್ತರ ಕಾಣಿಸುತ್ತಿದೆ. ಆಕೆಯು ಕಾಯ ಮೋಹದಿಂದ ಸರಿದು, ಆಕೆ ಏರಿರುವ ಎತ್ತರವನ್ನು ಲೋಕಭಾಷೆಯಲ್ಲೇ ತಿಳಿಸುತ್ತಿದ್ದಾಳೆ. ಕಿನ್ನರಿಬೊಮ್ಮಯ್ಯನು ಯಾವ ಪ್ರತಿಮಾತನ್ನು ಹೇಳಲಾರದೆ ಹೋಗಿದ್ದಾನೆ. ಇದು ಕಾಯಮೋಹಕ್ಕೆ ಒಳಗಾದವರಿಗೆ ಅಕ್ಕನ ದಿಟದ ನುಡಿಗಳಾಗಿವೆ. ಕಿನ್ನರಿ ಬೊಮ್ಮಯ್ಯ ಇಲ್ಲಿ ಪರೀಕ್ಷಕ ಮಾತ್ರ. ಆತನ ಪರೀಕ್ಷೆಯಿಂದ ಅಕ್ಕ ಸುಮ್ಮಾನಗೊಂಡಳು. ಲೋಕದ ಜನ ‘ಕಾಮಾಗ್ನಿ’ಯಲ್ಲೇ ಉಳಿದಿದ್ದಾರೆ. ಅದು ನಶ್ವರ. ಮನುಷ್ಯನೊ ಐದು ವಿಷಯೇಂದ್ರಿಯಗಳ ದಾಸನಾಗಿದ್ದಾನೆ. ಅಲ್ಲಿಂದ ಅವನು ಮುಕ್ತನಾಗಬೇಕು. ಗಂಡು ಸದಾ ಇಂದ್ರಿಯಂಗಳ ಮೋಹಕ್ಕೆ ಒಳಗಾಗುವುದು ಲೋಕಸಹಜ ಕಾರ್ಯ.
ಇದು ಅಕ್ಕನ ಮಾತಿನಲ್ಲಿ ನಿರ್ಯಾಣಗೊಳ್ಳುತ್ತಿದೆ. ಅಕ್ಕನು ಚೆನ್ನಮಲ್ಲಿಕಾರ್ಜುನನನ್ನು ತನ್ನ ಪುರುಷನನ್ನಾಗಿ ಭಾವಿಸಿಬಿಟ್ಟಿದ್ದಾಳೆ. ಇಲ್ಲಿ ಬರುವ ‘ಚೆನ್ನ ಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರ’ ಎಂಬ ಮಾತು ಅಕ್ಕನ ಪ್ರಧಾನ ತತ್ತ್ವವಾಗಿದೆ. ಪುರುಷ ಎಂಬ ಮಾತಿಗೆ ‘ಪುರಿ-ಶೇತೇ ಇತಿ ಪುರುಷಃ’ ಎಂಬ ಮಾತುಂಟು. ‘ಪುರಿ’ ಎಂದರೆ ಭಗವಂತನು ಇರುವ ಸ್ಥಳ. ಅಕ್ಕಮಹಾದೇವಿಯು ಶಿವನನ್ನೇ ತನ್ನ ಪುರುಷನೆಂದೂ ಉಳಿದವರು ಸಹೋದರರೆಂದೂ ಹೇಳುತ್ತಿರುವ ಮಾತಿನಲ್ಲಿ, ಲೌಕಿಕದಿಂದ ಅಧ್ಯಾತ್ಮಕ್ಕೆ ಹಾರಿರುವ ನಿಜಸಂಗತಿ ಬಯಲಾಗಿದೆ.
ಅಕ್ಕನ ಮಾತಿಗೆ ಕಿನ್ನರಿಬೊಮ್ಮಯ್ಯನು ಮೂಕವಿಸ್ಮಿತ ನಾಗಿಬಿಡುತ್ತಾನೆ. ಅವನು ಮಹಾನುಭಾವರು ಸೇರಿರುವ ಗೋಷ್ಠಿಗೆ ಬಂದು ಸೇರುತ್ತಾನೆ. ಅನಂತರ ಅಕ್ಕಮಹಾದೇವಿಯು ಅನುಭವಗೋಷ್ಠಿಗೆ ಬರುತ್ತಾಳೆ. ಅಲ್ಲಿ ಸಮಸ್ತ ಶರಣರನ್ನು ಕಾಣುತ್ತಾಳೆ. ಅಲ್ಲಮನು ದಿವ್ಯತೆಯಲ್ಲಿ ವಿರಾಜಮಾನನಾಗಿದ್ದಾನೆ. ಅವನ ಸನಿಹದಲ್ಲಿ ಬಸವಣ್ಣ ಮಂಡಿಸಿದ್ದಾನೆ. ಉಳಿದ ಶರಣರಿಗಿಂತ ಬಸವಣ್ಣ ಸುಲಭಗ್ರಾಹ್ಯ! ಅವನದು ತಾಯಿಕರುಳು. ಆ ಕರುಳಿನಲ್ಲಿ ದಯೆ, ಕಾರುಣ್ಯ, ಮಮತೆ ಮುಂತಾದ ಹತ್ತಾರು ಸದ್ಗುಣಗಳಿವೆ.
ಅಕ್ಕನಿಗೆ ಇದು ಅಂತರಂಗದ ಮೂಲಕವೇ ತಿಳಿಯುತ್ತದೆ! ಆಗ ಅವಳು: ಅರಸಿ ತೊಳಲಿದರಿಲ್ಲ ಹರಸಿ ಬಳಲಿದರಿಲ/ಬಯಸಿ ಹೊಕ್ಕರೆ ಇಲ್ಲ, ತಪಸ ಮಾಡಿದಡಿಲ್ಲ/ಅದು ತನ್ನ ಅಹ ಕಾಲಕ್ಕಲ್ಲದೆ ಸಾಧ್ಯವಾಗದು;/ಶಿವನೊಲಿದಲ್ಲದೆ ಕೈಗೂಡದು;/ಚೆನ್ನಮಲ್ಲಿಕಾರ್ಜುನನೆನಗೆ ಒಲಿದನಾಗಿ/ ನಾನು ಸಂಗನ ಬಸವಣ್ಣನ/ ಶ್ರೀಪಾದವ ಕಂಡು ಬದುಕಿದೆನು!
(ಶಿವ.ಶೂನ್ಯ.ಸಂ.-ಪುಟ 165)
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು) (ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)