

ಬೆಂಗಳೂರು: "ವಿನಾಶಕಾಲೇ ವೀಪರಿತ ಬುದ್ದಿ" ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಪಾಕಿಸ್ತಾನಕ್ಕೆ ಜೈಕಾರ ಕೂಗಿದವರನ್ನು ರಕ್ಷಿಸುತ್ತಾ ನೈತಿಕವಾಗಿ ಸಹ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
"ಪವಿತ್ರ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ದೇಶದ್ರೋಹಿಯನ್ನು ಬಂಧಿಸಲು ತಾಕತ್ತು, ದಮ್ಮು ಇಲ್ಲದ ಕಾಂಗ್ರೆಸ್, ಪ್ರಕರಣದ ಸಾಕ್ಷಿಗಳನ್ನು ನಾಶಗೊಳಿಸಲು ಯತ್ನಿಸುತ್ತಿರುವುದು ಎಫ್.ಎಸ್.ಎಲ್ ವರದಿ ಬಗ್ಗೆ ಆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿ. ಹೇಳಿಕೆ ಬಗ್ಗೆ ವಿಡಿಯೋ ಸಾಕ್ಷಿಯಿದ್ದರೂ ದೇಶದ್ರೋಹಿಗಳನ್ನು ಬಂಧಿಸಲು ಎಫ್.ಎಸ್.ಎಲ್ ವರದಿ ಬರುವ ತನಕ ಕಾಯುತ್ತಿರುವುದು ಯಾವ ಪುರುಷಾರ್ಥ ಸಾಧನೆಗೆ..??" ಎಂದು ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲಾ ಪ್ರಕರಣಗಳಲ್ಲಿಯೂ ಎಫ್.ಎಸ್.ಎಲ್ ವರದಿ ಬಂದ ನಂತರವೇ ಅಪರಾಧಿಗಳನ್ನು ಬಂಧಿಸುತ್ತಿದ್ದಾರಾ?? ಸಿಎಂ ಅವರೇ ನಿಮ್ಮ ಅಂತರಾಳದಲ್ಲಿ ಕನಿಷ್ಟ ದೇಶ ಪ್ರೇಮವಿದ್ದರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಆ ದೇಶದ್ರೋಹಿಯನ್ನು ಮೊದಲು ಬಂಧಿಸಿ, ನಿಮಗೆ ಮತ ಹಾಕಿದ ಕನ್ನಡಿಗರಿಗೆ ಹಾಗೂ ಸಂವಿಧಾನಕ್ಕೆ ಗೌರವ ಸಲ್ಲಿಸಿ" ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.