ಬಸವಣ್ಣನವರ ದೃಷ್ಟಿಯಲ್ಲಿ ದೈವ ಪ್ರಾರ್ಥನೆ ಮತ್ತದರ ಮಹತ್ವ

basavanna6
Published on
ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ನೀಡಿರುವ ಲೇಖನ ಇಲ್ಲಿದೆ.

ಪ್ರಾರ್ಥನೆಯು ಭಕ್ತ ಮತ್ತು ಭಗವಂತನ ನಡುವಿನ ಸೇತುವೆ. ಶಿವ ಮತ್ತು ಜೀವರ ಸಮರಸಕ್ಕೆ ಮೂಲ ತಲಪಾಯವೇ ಪ್ರಾರ್ಥನೆ. ಸೇತುವೆ ಸದೃಢವಾದಷ್ಟು ಪಯಣ ಸುರಕ್ಷಿತ. ಪ್ರಾರ್ಥನೆ ಶಿವ ಜೀವರ ನಡುವಿನ ಸೇತುವೆ ಎಂದು ಭಾವಿಸುವದಾದರೆ ಅದು ನಿಶ್ಕಲ್ಮಶ ಆಗಿರಬೇಕು ಹಾಗೂ ಯಾವುದೇ ಪ್ರತಿಫಲಾಪೇಕ್ಷೆಯಿಂದ ಕೂಡಿರಬಾರದು. ಸಮರ್ಪಣಾಭಾವ ಭಕ್ತಿಯ ಮೂಲ ಲಕ್ಷಣ. ಭಕ್ತಿಯಿಂದ ದೇವರಿಗೆ ಅರ್ಪಿಸುವ ಪದಾರ್ಥ ಮಾತ್ರ ಶುದ್ಧವಾಗಿದ್ದರೆ ಸಾಲದು. ಸಮರ್ಪಿಸುವ ಸಾಧಕನ ಮನಸೂ ಪರಿಶುದ್ಧವಾಗಿರಬೇಕು. ನಾವು ಮಾಡುವ ಪ್ರಾರ್ಥನೆಯಲ್ಲಿ ದೇವರ ಮೇಲೆ ಪ್ರೀತಿ ಹಾಗೂ ಲೋಕದ ಬಗೆಗೆ ಕಾಳಜಿಯಿರಬೇಕು. ಸ್ವಾರ್ಥದಿಂದ ಮಾಡುವ ಪ್ರಾರ್ಥನೆ ಬೇಡಿಕೆಯಾಗುತ್ತದೆ ವಿನಃ ಪ್ರಾರ್ಥನೆಯಾಗುವದಿಲ್ಲ. ಜೀವ ನಾದವನು ದೇವರನ್ನು ಪ್ರಾರ್ಥಿಸುವುದೇ ತನ್ನ ಒಳಿತಿಗಾಗಿ. ತನಗೆ ಕಷ್ಟಕಾಲದಲ್ಲಿ ಮಾತ್ರ ದೇವರನ್ನು ಪ್ರಾರ್ಥಿಸುವ ಮನುಷ್ಯ ಸದಾ ತನ್ನ ಬೇಡಿಕೆಗಳ ಸರಮಾಲೆಯನ್ನು ದೇವರಿಗೆ ಅರ್ಪಿಸುತ್ತ ಇರುತ್ತಾನೆ. ಭಕ್ತನಾದವನು ದೇವರಿಗಾಗಿ ಪ್ರಾರ್ಥಿಸಬೇಕೆ ವಿನಃ ಸಾಂಸಾರಿಕ ಬಯಕೆಗಳಿಗಾಗಿ ಅಲ್ಲ. ತನ್ನ ಆಶೋತ್ತರಗಳಿಗಾಗಿ ಮಾಡುವ ಪ್ರಾರ್ಥನೆಯಲ್ಲಿ ಬೇದಿಕೆಯ ವಸ್ತುಗಳ ಮೇಲಿನ ವ್ಯಾಮೋಹವೇ ಅಧಿಕವಾಗಿರುತ್ತದೆ. ಇದು ಪರಿಶುದ್ಧ ಭಕ್ತಿಯನುಸುವದಿಲ್ಲ. ಬೇಡುವದು ತಪ್ಪಲ್ಲ. ಆದರೆ ಆ ಬೇಡಿಕೆಯಲ್ಲಿ ಸ್ವಾರ್ಥವಿರಬಾರದು. ಪರಹಿತ ಲೋಕದ ಒಳಿತಿಗಾಗಿ ಮೊರೆಯಿಡುವ ನಿಸ್ವಾರ್ಥ ಬಾವವಿರಬೇಕು.

ಕಾಗೆ ವಿಷ್ಟೈಸುವ ಹೊನ್ನ ಕಲಶವಹುದರಿಂದ

ಒಡೆಯರು ಜೋಗೈಸುವ ಚಮ್ಮವುಗೆಯ ಮಾಡಯ್ಯ

ಅಯ್ಯ ನಿಮ್ಮ ಶರಣರ ಪಾದಕ್ಕೆ ಚಮ್ಮವುಗೆಯ ಮಾಡಯ್ಯ

ಕೂಡಲ ಸಂಗಮದೇವಾ .

ನಿಮ್ಮ ಸೆರಗೊಡ್ಡಿ ಬೇಡುವೆ ಇದೊಂದೇ ವರ ಕರುಣಿಸಯ್ಯ.

ಎಂಬ ಬಸವಣ್ಣನವರ ವಚನ ಅವರ ಪರ ಹಿತ ಭಾವನೆಗೆ ನಿದರ್ಶನ. ಅಪ್ರಯೋಜಕವಾದ ದೊಡ್ಡ ಸ್ಥಾನಕಿಂತ ಕೀಳೆನಿಸಿದರೂ ಸಾರ್ಥಕವಾದ ಸ್ಥಾನವಿರಬೇಕು. ಆವರ ದೃಷ್ಟಿಯಲ್ಲಿ ಅನ್ಯರ ಹಿತಕ್ಕಾಗಿ ಮಾಡುವ ಸೇವಾ ಭಾಗ್ಯದಷ್ಟು ಹಿರಿದಾದ ಸ್ಥಾನ ಮತ್ತೋಂದಿಲ್ಲ. ಇಲ್ಲಿ ಅವರು ದೇವರಲ್ಲಿ ಬೇಡುವ ಕೋರಿಕೆಯೇ ಅತ್ಯಂತ ಅರ್ಥಪೂರ್ಣವಾದದ್ದು. ಸುವರ್ಣದ ಕಲಶ ಶ್ರೇಷ್ಠ ಚರ್ಮದ ಪಾದರಕ್ಷೆ ಕನಿಷ್ಠ ಎಂದು ಲೋಕದ ಜನರು ಭಾವಿಸಿದರೆ, ಬಸವಣ್ಣನವರು ಜಂಗಮರ ಸೇವೆಗೆ ಒದಗುವ ಚರ್ಮದ ಪಾದರಕ್ಷೆಯಾಗಿ ಮಾಡಿ ಎಂಬುದಾಗಿ ಪ್ರಾರ್ಥಿಸುತ್ತಾರೆ. ಎತ್ತರದಲ್ಲಿದ್ದು ಕಾಗೆಯಿಂದ ಕೊಳೆ ಮಾಡಿಸಿಕೊಳ್ಳುವ ಬದಲು ಕೀಳಾಗಿಯಾದರೂ ಒಬ್ಬರ ಒಳಿತಿಗಾಗಿ ಉಪಯುಕ್ತವಾಗುವುದೇ ಲೇಸು ಎಂಬ ಅವರ ಪರಹಿತ ದಲ್ಲಿಯೇ ಸಾರ್ಥಕತೆ ಕಾಣುವ ಮನಸ್ತಿತಿಯನ್ನು ತೋರಿಸುತ್ತದೆ. ದೇವರೊಲಿದರೆ ಆಸೆಯ ಜೋಳಿಗೆಯನ್ನೇ ಹಿಡಿದು ನಿಲ್ಲುವವರು ಅನೇಕರಿರ ಬಹುದು. ಆದರೆ ಅದು ಪ್ರಾರ್ಥನೆಯ ಲಕ್ಷಣವಲ್ಲ. ದೇವರ ಬಳಿ ಹೋದಾಗ ಮನಸು ಭಕ್ತಿ ಭಾವದಿಂದ ಲೋಕದ ಹಿತ ಕಾಯುವಂತಿರಬೇಕು. ಬದಲಿಗೆ ಮನಸು ಭಿಕ್ಷಾಪಾತ್ರೆಯಾಗಿರಬಾರದು. ಇಲ್ಲಿ ಬಸವಣ್ಣನವರು ಸಾಧನೆಯ ಪ್ರತಿ ಕ್ಷಣದಲ್ಲಿಯೂ ಅನ್ಯರ ಒಲಿತಿಗಾಗಿಯೇ ಚಿಂತಿಸು ವಿಶಿಷ್ಟ ಮನಸ್ತಿತಿ ಹೊಂದಿರುವದನ್ನು ಕಾಣುತ್ತೇವೆ. ಪರಸೇವೆಯಲ್ಲಿಯೇ ಬದುಕಿನ ಸಾರ್ಥಕತೆಯನ್ನು ಕಾಣುವ ಅಪರೂಪದ ಸಮಾಜ ಚಿಂತಕರು ಬಸವಣ್ಣನವರು.

ಜೀವನ ಪ್ರತಿ ಹೆಜ್ಜೆಯನ್ನು ಲೋಕದ ಹಿತಕ್ಕಾಗಿ ಸದಾ ಭಗವಂತನಲ್ಲಿ ಮೊರೆಯಿಡುವ ಅವರು ಎಲ್ಲಿಯೂ ಸ್ವಾರ್ಥವನ್ನು ಮೆರೆದವರಲ್ಲ. 'ಆರಂಭ ಮಾಡುವೆ ಲಿಂಗಾರ್ಚನೆಗೆಂದು' ಎಂದು ಹೇಳುವ ಅವರು, ಗುರುಲಿಂಗ ಜಂಗಮ ದಾಸೋಹಕ್ಕಾಗಿಯೇ ತಮ್ಮ ಅಮ್ಮೂಲ್ಯ ಬದುಕನ್ನು ಮೀಸಲಿರಿಸಿದವರು. ಅದರಲ್ಲಿಯೇ ಸರ್ವಸ್ವವನ್ನೂ ಕಂಡವರು. ಭಗವಂತ ಬದುಕನ್ನು ಕೊಟ್ಟಿರುವುದೇ ಪರಹಿತ ಕಾಯಲೆಂದು. ಆಮ್ತ ಭಗವಂತನ ಪ್ರಾಥನೆಯಲ್ಲಿ ಸ್ವಾರ್ಥವಿರಬಾರದೆಂಬ ಅವರ ನಿಲುವು ಸರಕಾಲಕ್ಕೂ ಆದರ್ಶವಾದದ್ದು. ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ಎಂದು ಸಮಸ್ಥ ಸಂಬಂಧಗಳನ್ನೂ ಕೂಡಲಸಂಗಮನಲ್ಲಿ ಕಾಣುವ ಅವರು ಕೊನೆಯಲ್ಲಿ 'ಹಾಲಲ್ಲಾದರೂ ಅದ್ದು, ನೀರಲ್ಲಾದರೂ ಅದ್ದು' ಎಂದು ಹೇಳುವಲ್ಲಿ ಭಗವಂತನಲ್ಲಿ ಇರಿಸಿದ ನಿಸ್ವಾರ್ಥಮೊರೆ ವ್ಯಕ್ತವಾಗಿದೆ. ಹಾಲು ಮತ್ತು ನೀರು ಸುಖ ದುಃಖವನ್ನು ಪ್ರತಿನಿಧಿಸುತ್ತವೆ. ಸುಖವನ್ನೇ ನೀಡೆಂದು ಕೇಳಿಲ್ಲ. ಬದಲಿಗೆ ಏನೇ ನೀಡಿದರೂ ಅದನ್ನು ಧನ್ಯತಾ ಭಾವದಿಂದ ಸ್ವೀಕರಿಸುವ ಉದಾತ್ತ ಮನೋಭಾವ ಬಸವಣ್ಣನವರದು. ಪ್ರಾರ್ಥನೆಯಲ್ಲಿ ಅಮೂಲ್ಯವಾದ ಬದುಕನ್ನು ಕೊಟ್ಟ ಭಗವಂತನ ಬಗ್ಗೆ ಧನ್ಯತೆಯ ಭಾವವಿರಬೇಕೆ ಹೊರತು, ಐಹಿಕ ಭೋಗ ಭಾಗ್ಯಗಳ ಬೇಡಿಕೆಯಿರಬಾರದು. ಸಕಲ ಜೀವ ರಾಶಿಗಳಲ್ಲಿ ಶ್ರೇಷ್ಠ ವೆನಿಸಿದ ಮಾನವ ಜನ್ಮವನ್ನೇ ಕೊಟ್ಟಿರುವಾಗ ಅದಕಿಂತ ಮಿಗಿಲಾದ ವಸ್ತು ಬೇರೊಂದಿಲ್ಲ. ಹೀಗಿರುವಾಗ ಶಿವ ಮೆಚ್ಚುವಂತಹ ಸೇವೆ ಮಾಡಿ ಅದರ ಋಣ ತೀರಿಸುವುದೇ ಸಾರ್ಥಕ ಬದುಕು. ಬೇಡಿದಷ್ಟು ಸಾಂಸಾರಿಕ ಬಂಧಿತನಾಗುತ್ತಾನೆ, ಸೇವೆ ಮಾಡಿದಷ್ಟು ಮುಕ್ತನಾಗುತ್ತಾನೆ. ಬಸವಣ್ಣನವರ ಬದುಕು ಮುಕ್ತಿ ಮಾರ್ಗದ ಸೋಪಾನವೇ ಹೊರತು, ಬಂಧನದ ದಾರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net