ಜರೆದವರನ್ನು ಜನ್ಮ ಬಂಧುಗಳೆಂದು, ಹೊಗಳಿಕೆಯನ್ನು ಹೊನ್ನಶೂಲವೆಂದು ಬಗೆದ ಬಸವಣ್ಣ!

basavanna10
Published on
ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ನೀಡಿರುವ ಲೇಖನ ಇಲ್ಲಿದೆ.

ಸ್ತಿತ ಪ್ರಜ್ಞತೆ ಯಾವದೇ ಒಬ್ಬ ಯೋಗಿಯ ಮುಖ್ಯ ಲಕ್ಷಣ. ಲೋಕದ ಜಂಜಡಗಳನ್ನು ಮೀರಿ ನಿಂತ ಅವರಲ್ಲಿ ಮಾನಸಿಕ ಏರಿಳಿತಗಳು ಸಂಭವಿಸುವದಿಲ್ಲ. ಅವರ ಬದುಕು ಅಂತರಾತ್ಮನ ವಶದಲ್ಲಿರುತ್ತವೆಯೇ ಹೊರತು, ಬಾಹ್ಯ ಆಗು ಹೋಗುಗಳು ಅವರನ್ನು ಕಾಡುವದಿಲ್ಲ. ಅಂತೆಯೇ ಅವರು ಸುಖದುಃಖ, ಹಾನಿವೃದ್ಧಿ ಗಳನ್ನು ಸಮನಾಗಿ ಸ್ವೀಕರಿಸುತ್ತರೆಯೇ ಹೊರತು. ಮಾನಸಿಕ ವಿಚಲತೆಗೆ ಒಳಗಾಗುವದಿಲ್ಲ. ಬಸವಣ್ಣನವರು ಇಂತಹ ಮನಸ್ತಿತಿಯನ್ನು ಹೊಂದಿದ ಮಹಾನು ಭಾವರು. ಅವರು ತನುವಿನಲ್ಲಿದ್ದು ತನುವ ಗೆದ್ದವರು. ಮನದೊಳಿದ್ದು ಮನವ ಗೆದ್ದವರು. ಬಡತನ ಸಿರಿತಗಳು ಸ್ತುತಿ ನಿಂದೆಗಳು ಎಂದಿಗೂ ಅವರನ್ನು ಮಾನಸಿಕ ಬಾಧೆಗೆ ಈಡು ಮಾಡುವದಿಲ್ಲ. ಬಸವಣ್ಣನವರಲ್ಲಿ ಕಾಣುವ ಬಹುದೊಡ್ಡಗುಣ ಅವರ ಹೃದಯ ವೈಶಾಲ್ಯತೆ. ಅದರಿಂದಲೇ ಅವರು ಸಮಸ್ತ ಜನತೆಯ ಹೃದಯ ಗೆದ್ದವರು. ಹಾಗೂ ಲೋಕ ಪೂಜ್ಯರಾದವರು. ತಮ್ಮ ಇಡೀ ಬದುಕಿನ ಸೂತ್ರವನ್ನೇ ಕೂಡಲ ಸಂಗಮನ ಕೈ ಗೆ ಕೊಟ್ಟವರು. ಅಂತೆಯೇ ಬಂದುದೆಲ್ಲವೂ ಅವನ ಪ್ರಸಾದ, ಹೋದುದೆಲ್ಲವೂ ಲಿಂಗಾರ್ಪಿತ ಎಂಬ ಭಾವದಿಂದ ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಬಂದವರು. ಈ ಮನಸ್ತಿತಿ ಅವರು ಹೊಂದಿರುವದರಿಂದಲೇ ಅವರಲ್ಲಿ ಮಾನವ ಸಹಜ ದೌರ್ಬಲ್ಯಗಳಾದ ಕೋಪ, ತಾಪ, ದ್ವೇಶ, ಅಸೂಯೆ ಸುಳಿಯಲಿಲ್ಲ. ಸದಾ ಶಾಂತ ಚಿತ್ತರಾಗಿ ಸರ್ವರನ್ನೂ ಸಲುಹಿದವರಾದರು. ಈ ಒಂದು ಮನಸ್ತಿತಿಯನ್ನು ಹೊಂದುವುದು ಅತಿ ಕಷ್ಟದಾಯಕ. ಅವಿರತವಾದ ಶರೀರ ಮತ್ತು ಮಾನಸಿಕ ದಂಡನೆಯಿಂದ ಅಂತಹ ಸ್ಥಿತಿ ತಲುಪಿದ್ದರು.

ನಿತ್ಯ ಬದುಕಿನಲ್ಲಿ ಶಾಂತಿ ಸಮಾಧಾನ ಬಯಸುವ ಯಾರೇ ಅಗಲಿ ಇಂತಹ ವ್ಯಕ್ತಿತ್ವ ಸಂಪಾದಿಸಿಕೊಳ್ಳಲೇ ಬೇಕು. ಅದಿಲ್ಲದಿದ್ದರೆ ಶಾಂತಿ ಸಮಾಧಾನಗಳು ಮರೀಚಿಕೆಯಾಗುತ್ತವೆ. ಜೀವನ ಏರು ಪೇರುಗಳು ಮನಸಿನ ಸ್ತಿತಿಯನ್ನು ಕಂಗೆಡಿಸಿ ಚಿತ್ತ ಚಂಚಲತೆ, ಮಾನಸಿಕ ಅಸ್ವಸ್ತತೆ ತಲೆ ದೋರುತ್ತವೆ. ಪ್ರತಿಯೊಬ್ಬರ ಬದುಕಿನಲ್ಲಿ ಎದುರಾಗುವ ಏರಿಳಿತಗಳು ಮನ ಸನ್ಮಾನಗಳು ಮನೋವಿಕಾರತೆಗೆ ಕಾರಣವಾಗುತ್ತವೆ. ಹೊಗಳಿಕೆ, ಮಾನ ಸನ್ಮಾನಗಳಿಂದ ಬೀಗಿ ನಡೆಯುವವರು ಎಲ್ಲೋ ಒಂದುಕಡೆ ತಮ್ಮನ್ನೇ ತಾವು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಶರೀರಕ್ಕಾದ ಪೆಟ್ಟಿಗಿಂತ ಅಹಂಕಾರಕ್ಕೆ ಬಿದ್ದ ಪೆಟ್ಟು ಮನುಷ್ಯನ ಮಾನಸಿಕ ಸ್ತಿತಿ ಹಾಗೂ ಸಹನೆಯನ್ನು ನಾಶಮಾಡಿ ಮಾನಸಿಕ ಉದ್ವೇಗಕ್ಕೆ ಒಳಗಾಗುವಂತೆ ಮಾಡುತ್ತದೆ.. ಅಹಂಕಾರದಲ್ಲಿ ಬೀಗುವ ವ್ಯಕ್ತಿಗೆ ಮಾನ ಸನ್ಮಾನಗಳಲ್ಲಿ ಹೊಗಳಿಕೆ ಸ್ತುತಿಗಳಲ್ಲಿ ಕಿಂಚಿತ್ತು ಕೊರತೆಯಾದರೂ ಮಾನಸಿಕ ಸ್ತಿಮಿತತೆಯನ್ನು ಕಳೆದು ಕೊಳ್ಳುತ್ತಾರೆ. ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಮನಸು ವಿಕಾರವಾಗಿ ಕೋಪ ತಾಪಗಳು ಉಕ್ಕೇರಿ ಬರುತ್ತವೆ. ಬಸವಣ್ಣನವರು ಹೇಳಿದ ಬಹು ಮುಖ್ಯವಾದ ಮಾತು ತನುವಿನ ಕೋಪ ಹಿರಿತನದ ಕೇಡು, ಮನದ ಕೋಪ ಅರಿವಿನ ಕೇಡು.

ಹೊಯ್ದವರೆನ್ನ ಹೊರೆದವರೆಂಬೆ, ಬೈದವರೆನ್ನ ಬಂಧುಗಳೆಂಬೆ,

ನಿಂದಿಸಿದವರೆನ್ನ ತಮ್ದೆ ತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದರೆಂಬೆ,

ಜರೆದವರೆನ್ನ ಜನ್ಮ ಬಂಧುಗಳೆಂಬೆ,

ಹೊಗಳಿದವರೆನ್ನ ಹೊನ್ನಶೂಲದಲ್ಲಿಕ್ಕಿದರೆಂಬೆ

ಕೂಡಲ ಸಂಗಮದೇವಾ

ಬಸವಣ್ಣ ನವರ ಇಂತಹ ವಚನಗಳು ಎಂತಹವರನ್ನೂ ರೋಮಾಂಚನ ಗೊಳಿಸುತ್ತವೆ. ಎಂತಹ ಸತ್ವ ಪರೀಕ್ಷೆಯ ಸಮಯದಲ್ಲಿ ವಿಚಲಿತರಾಗದೇ ತಮ್ಮ ಮಾನಸಿಕ ಸಮಸ್ತಿತಿಯನ್ನು ಅವರು ಕಾಪಾಡಿಕೊಂಡು ಬಂದ ರೀತಿ ನಿಜಕ್ಕೂ ಅದ್ಭುತವಾದದ್ದು. ಇಲ್ಲಿ ಶತೃವನ್ನೂ ಬಂಧುವಾಗಿ ಕಾಣುವ ಹೃದಯ ವೈಶಾಲ್ಯತೆ ಹಾಗೂ ತಮ್ಮ ಅಹಂಕಾರವನ್ನು ಸಂಪೂರ್ಣ ಬದಿಗಿರಿಸಿ ಕಾಪಾಡಿಡಿಕೊಂಡು ಬಂದ ಅವರ ಶಾಂತಚಿತ್ತತೆ. ಇವೆರಡರ ಬಲದಿಂದಲೇ ಅವರು ಜನಮನ ಗೆದ್ದ ಲೋಕ ಪೂಜ್ಯರಾದರು. ಅಂಹಂಕಾರವನ್ನೇ ಬದಿಗಿರಿಸಿ ಬಾಳುವ ವ್ಯಕ್ತಿ ಸ್ತುತಿ ನಿಂದೆಗಳು ಬಂದರೂ ಸಮಾಧಾನಿಯಾಗಿರುತ್ತಾನೆ. ಮನಸನ್ನು ವಿಕಾರ ಗೊಳಿಸುವ ಅಹಂಕಾರಕ್ಕಿಂತ ಸದಾ ಮನಸಿಗೆ ಸ್ತಿತಪ್ರಗ್ನೆಯನ್ನು ತಂದುಕೊಡುವ ಕಿಂಕರ ಭಾವವೇ ಲೇಸು. ಬಸವಣ್ಣ ಕೋಪ ತಾಪಗಳು, ದ್ವೇಶ ಅಸೂಯಗಳಂತಹ ತನು ವಿಕಾರ ಮತ್ತು ಮನ ವಿಕಾರಗಳನ್ನು ಗೆದ್ದ ಆಧ್ಯಾತ್ಮವೀರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net