ಕ್ರಾಂತಿ ಎಂಬ ಪದಕ್ಕೆ ಹೊಸ ಅರ್ಥವನ್ನು ತಂದುಕೊಟ್ಟ ಕ್ರಾಂತಿಕಾರಿ ಬಸವಣ್ಣ

basavanna2
Published on
ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ನೀಡಿರುವ ಲೇಖನ ಇಲ್ಲಿದೆ.

ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಕೈಗೊಂಡ ಚಳವಳಿ ಅತ್ಯಂತ ಮಹತ್ತರವಾದದ್ದು. ಕ್ರಾಂತಿ ಎಂಬ ಪದಕ್ಕೆ ಹೊಸ ಅರ್ಥವನ್ನು ತಂದು ಕೊಟ್ಟಿರುವಂತಹದ್ದು. ಕ್ರಾಂತಿ ಎಂದರೆ ಹಿಂಸಾ ಪ್ರಧಾನವಾದದ್ದು ಎಂಬ ಹೀನಾರ್ಥ ಹೊಂದಿದ್ದ ಕಾಲದಲ್ಲಿ ಅದು ಅಹಿಂಸಾ ಪ್ರಧಾನವಾದ ಬದುಕಿನ ಬದಲಾವಣೆ ಎಂಬ ಹೊಸ ಅರ್ಥ ಮೂಡಿಸಿದವರು ಬಸವಣ್ಣನವರು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬದುಕಿಗೆ ಹೊಸತನ ಮೂಡಿಸುವ ಮೂಲಕವಾಗಿ ಕ್ರಾಂತಿ ಎಂಬ ಪದಕ್ಕಿದ್ದ ಅರ್ಥವನ್ನೇ ಬದಲಿಸಿದವರು. ಈ ಮೂಲಕವಾಗಿ ಭಾಷೆ ಮತ್ತು ಬದುಕು ಹೊಸ ತಿರುವನ್ನು ಪಡೆದು ಕೊಂಡವು. ಗುಡಿ ಗೋಪುರಗಳ ಒಳಗೆ ನಡೆಯುವ ಹೋಮ ಹವನಗಳ ಸ್ಥಾನದಲ್ಲಿ ಆತ್ಮೋದ್ಧಾರದ ವಿಚಾರ ವಿಮರ್ಶೆಗಳು ನಡೆಯುವಂತಾದವು.

ಅನುಭವ ಮಂಟಪದಂತಹ ಚಿಂತನ ಕೇಂದ್ರಗಳು ಸಮಾನತೆಯ ಬೀಜ ಬಿತ್ತಿದವು. ಶಿಲೆಯ ದೇಗುಲಗಳು ಕೇವಲ ನೆಪ ಮಾತ್ರವಾಗಿ ಉಳಿದು ದೇಹವೇ ದೇಗುಲವೆಂಬ ನವೀನ ಪರಿಕಲ್ಪನೆಗಳು ಮೂಡಿದವು. ರಾಜಾಶ್ರಯದಲ್ಲಿ ರಾಜರಿಗೆ ಬೀಸುವ ಚಾಮರವಾಗಿದ್ದ ಸಾಹಿತ್ಯ ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಸಾಧನವಾಯಿತು. ಆಧ್ಯಾತ್ಮ ಸಾಧನೆಗೆ ಸಂಸ್ಕೃತದ ವೇದ ಮಂತ್ರಗಳೇ ಮುಖ್ಯವೆಂದು ಭಾವಿಸಿದ್ದ ಕಾಲದಲ್ಲಿ ಕನ್ನಡದ ಅಪ್ಪಟ ಜನಪದ ಭಾಷೆಯೂ ಆತ್ಮೋದ್ಧಾರದ ಸೋಪಾನವಾಗಿ ಬಳಕೆಯಾಯಿತು. ಜೀವನೋಪಾಯಕ್ಕೆ ಅಸನ ವಸನಕ್ಕೆ, ಉದರಪೋಷಣೆಗೆ ಸೀಮಿತವಾಗಿದ್ದ ದುಡಿಮೆಯು ಕಾಯಕ ಮತ್ತು ದಾಸೋಹದ ಸ್ವರೂಪವನ್ನು ಪಡೆಯಿತು. ವ್ಯಕ್ತಿಯು ಸ್ವಾಭಿಮಾನಿಯಾಗಿರುವುದು ತಪ್ಪಲ್ಲ, ಆದರೆ ಅಹಂಕಾರಿಯಾಗಿರಬಾರದು. ಅಂತೆಯೇ ಅಂತಹ ಸ್ವಾಭಿಮಾನದ ಬದುಕನ್ನು ರೊಪಿಸಿಕೊಳ್ಳುವ ಮನೋಭಾವವನ್ನು ಮೂಡಿಸಿದವರು ಬಸವಣ್ಣ. ರಾಜರ ಆಸ್ಥಾನದ ಆಸರೆಯೇ ದೊಡ್ಡದೆಂದು ಭಾವಿಸಿದವರ ಅರಿವಿನ ಕಣ್ಣು ತೆರೆಸಿ ಶಿವಭಕ್ತರ ಶ್ರೇಷ್ಥತೆಯನ್ನು ಮನದಟ್ಟು ಮಾಡಿಕೊಟ್ಟರು. ಅಂತರಂಗ-ಬಹಿರಂಗ ಶುದ್ಧಿಯಿಂದ ಬಾಳಿ ಬದುಕುವ, ಕಾಯಕ ದಾಸೋಹನ್ನೇ ಜೀವಾಳವಾಗಿಸಿಕೊಂಡ ಶರಣರ ಮಹತ್ವವನ್ನು ಮನದಟ್ಟು ಮಾಡಿದರು. ಜಾತಿ ಮತ ಅಧಿಕಾರ ಅಂತಸ್ತಿನಿಂದ ಶ್ರೇಷ್ಠತೆ ಬರುವದಿಲ್ಲ. ಬದಲಿಗೆ ಪರಿಶುದ್ಧವಾದ ನಡೆ ನುಡಿಗಳಿಂದ ಬರುವಂತಹದ್ದು. ಆಚಾರ ವಿಚಾರಗಳಿಂದ ವ್ಯಕ್ತಿ ಲೋಕ ಪೂಜ್ಯನಾಗಬಲ್ಲ ಎಂಬುದನ್ನು ಬಲವಾಗಿ ಪ್ರತಿಪಾದಿಸಿದರು.

ದೂಷಕನೊಬ್ಬ ದೇಶವ ಕೊಟ್ಟಡೆ,

ಆಸೆ ಮಾಡಿ ಅವನ ಹೊರೆಯಲಿರಬೇಡ,

ಮಾದಾರ ಶಿವ ಭಕ್ತನಾದಡೆ,

ಅವನ ಹೊರೆಯಲ್ಲಿ ಬೃತ್ಯನಾಗಿಪ್ಪುದು, ಕರಲೇಸಯ್ಯ,

ತೊತ್ತಾಗಿಪ್ಪುದು ಕರಲೇಸಯ್ಯ!

ಕಾಡಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,

ಕೂಡಿಕೊಂಡಿಪ್ಪುದು ನಮ್ಮ ಕೂಡಲ ಸಂಗನ ಶರಣರ

ಎಂಬ ಬಸವಣ್ಣನವರ ವಚನ ಅವರ ಇಡೀ ಚಳವಳಿಯ ಮೂಲ ಸ್ವರೂಪವನ್ನು ತೋರಿಸುವಂತಿದೆ. ದರ್ಪ ದೌರ್ಜನ್ಯಗಳೆ ತುಂಬಿದ ರಾಜರ ಆಸ್ಥಾನಗಳನ್ನು ನಿರಾಕರಿಸಿ ಸರಳತೆ ಸೌಜನ್ಯ ಪ್ರಾಮಾಣಿಕತೆಗಳನ್ನೇ ಪೂಜ್ಯ ಸ್ಥಾನದಲ್ಲಿಟ್ಟು ಗೌರವಿಸಿದವರು ಬಸವಣ್ಣನವರು. ಅಂತಹ ಮೌಲ್ಯಯುತ ಬದುಕನ್ನು ನಡೆಸುವವರಲ್ಲಿ ಜಾತಿ ಮತವನ್ನು ಅರಸಿದರೆ 'ನಿಮ್ಮಾಣೆ ನಿಮ್ಮ ಪ್ರಮಥರಾಣೆ' ಎಂಬ ಬಸವಣ್ಣನವರ ನಿಲುವು ಸಮಸ್ತ ಜಗತ್ತಿಗೂ ಆದರ್ಶವಾದದ್ದು. ಜಾತಿ ಮತ ಪಂಥಗಳ ಅಬ್ಬರದಲ್ಲಿ ಕಲುಷಿತವಾಗಿದ್ದ ಸಾಮಾಜಿಕ ಕಾಲಘಟ್ಟದಲ್ಲಿ ಬಸವಣ್ಣನವರ ಇಂತಹ ಕ್ರಾಂತಿಕಾರಕ ನಿಲುವುಗಳು ಸಮಾಜದಲ್ಲಿ ಹೊಸ ಸಂಚಲನವನ್ನು ಮೂಡಿಸಿದವು. ಕೀಳರಿಮೆಯಿಂದ ನಲುಗಿ ಹೋಗಿದ್ದ ಶೋಷಿತ ಸಮುದಾಯದಲ್ಲಿ ನವ ಚೈತನ್ಯ ಮೂಡುವಂತಾಯಿತಾಗಿದ್ದು ಬಸವಣ್ಣನವರ ಪ್ರೇರಣೆಯಿಂದ. ಸಮಾಜದಲ್ಲಿ ಜಾತಿ ಲಿಂಗ ಭೇದ ಭಾವಗಳು ಅಳಿದು ಮುಕ್ತ ವಾತಾವರಣ ಮೂಡಿತು.

ಮಡಿವಂತಿಕೆ ಅಳಿದು ಮುಕ್ತ ವಾತಾವರಣವಿದ್ದಲ್ಲಿ ಶೂದ್ರನಲ್ಲಿಯೂ ಶಿವತ್ವ ಕಾಣಬಹುದು ಎಂಬ ಬಸವಣ್ಣನವರ ನಿಲುವು ಸಮಾಜದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿ ಮಾಡಿತು. ಸಾಮಾಜಿಕ ಚಳವಳಿಯಲ್ಲಿ ಸ್ತ್ರೀಯರು ಪಾಲ್ಗೊಳುವಂತಾಯಿತು. ಅಕ್ಕಮಹಾದೇವಿ, ಸೂಳೆ ಸಂಕವ್ವೆ ಕೂಡ ಶರಣರಾಗಿ ವಚನಕಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡರು. ಮೇಲು ಕೀಳೆಂಬ ಭಾವ ತೊಲಗಿ ಇರುವವು ಎರಡೇ ಜಾತಿ. ಅವು ಒಂದು ಭವಿ, ಮತ್ತೊಂದು ಭಕ್ತ. ಅಂತರಂಗ ಶುದ್ಧಿ ಬಹಿರಂಗ ಶುದ್ಧಿಯಿಂದ ಶೂದ್ರನೂ ಶರಣನಾಗಬಲ್ಲ ಎಂಬುದನ್ನು ಮೊದಲಬಾರಿಗೆ ತೋರಿದವರು ಬಸವಣ್ಣನವರು. ಅಂತೆಯೇ ಬಸವಣ್ಣನವರ ಕ್ರಾಂತಿಯ ಫಲವಾಗಿ ದಲಿತನೂ ವಚನಗಳನ್ನು ಹೊಮ್ಮಿಸುವ ಮೂಲಕ ನಾಡಿಗೆ ಬೆಳಕಾಗುವಂತಾಯಿತು. ಇದೆಲ್ಲವನ್ನೂ ನೋಡಿದಾಗಿ ಸಮಾಜದ ಆಮೂಲಾಗ್ರ ಬದಲಾವಣೆಯನ್ನೇ ಬಸವಣ್ಣನವರು ಕ್ರಾಂತಿ ಎಂಬುದಾಗಿ ಪ್ರತಿಪಾದಿಸಿದರು. ಸರ್ವರಿಗೂ ಸಮಾನತೆಯ ಮುಕ್ತ ವಾವರಣವನ್ನು ಮೂಡಿಸಿ, ಅದನ್ನು ಕಾರ್ಯಗತಗೊಳಿಸಲು ಇಡೀ ತಮ್ಮ ಬದುಕನ್ನೇ ಮೀಸಲಾಗಿರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net