

---
ಬಸವಣ್ಣ ಲೋಕೋದ್ಧಾರಕ, ಸಮಾಜ ಸುಧಾರಕ, ಕ್ರಾಂತಿಕಾರಿ, ಶರಣ ಸಂಕುಲದ ಶಿಖಾಮಣಿ ಎಂಬೆಲ್ಲಾ ಅಗ್ಗಳಿಕೆಗೆ ಪಾತ್ರರಾದವವರು. ಈ ಎಲ್ಲ ಅಗ್ಗಳಿಕೆಗೆ ಪಾತ್ರರಾಗಲು ಅವರ ಅನುಸರಿಸಿದ ಸಾಧನಾ ಮಾರ್ಗ ಅತಿ ಮಹತ್ವದ್ದು. ಅದೇ ಅವರ ಆತ್ಮಾವಲೋಕನ ಕ್ರಮ. ಇದು ಅವರ ಬದುಕಿನುದ್ದಕ್ಕೂ ಅನುಸರಿಸುಕೊಂಡು ಬಂದ ಮಹತ್ವದ ಸಾಧನೆ. ಅದೇ ಅವರನ್ನು ವಿಶ್ವದ ಮಹಾನ್ ದಾರ್ಶನಿಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿತು. ಅವರ ಸಾಕಷ್ಟು ವಚನಗಳಲ್ಲಿ ಕಂಡು ಬರುವ ಏಕೈಕ ಲಕ್ಷಣ ಆತ್ಮ ವಿಮರ್ಶೆ. ಅವರು ಲೋಕವನ್ನು ತಿದ್ದುವ ಮೊದಲು ತಮ್ಮನ್ನು ತಾವು ವಿಮರ್ಶಿಸಿಕೊಂಡು ಪರಿಶುದ್ಧಾತ್ಮರಾದರು. ಅವರ ದೃಷ್ಟಿಯಲ್ಲಿ ಶಿವಾರ್ಚನೆ ಪೂಜೆಮಾಡಿ ವರ ಪಡೆಯುವ ಸಾಧನವಲ್ಲ. ಬದಲಿಗೆ ತಮ್ಮಿಷ್ಟ ದೈವವನ್ನು ಆತ್ಮ ಸಾಕ್ಷಿಯಾಗಿರಿಸಿಕೊಂಡು ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳುವ ಸಾಧನ. ಆ ಮೂಲಕ ಮಾನವ ಸಹಜ ದೌರ್ಬಲ್ಯಗಳನ್ನು ನಿವಾರಿಸಿ ಅಂತರಂಗದಲ್ಲಿ ಸಾತ್ವಿಕ ಗುಣಗಳು ನೆಲೆಗೊಳ್ಳುವಂತೆ ಮಾಡಿಕೊಳ್ಳುವುದು. .
ಯಾವದೇ ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಳ್ಳುವುದು ಅವರ ಲೋಪ ದೋಷಗಳನ್ನು ತಿದ್ದಿಕೊಳ್ಳುವಮೂಲಕ. ಹೊಗಳಿಕೆ, ಮುಖಸ್ತುತಿಗಳು ನಮ್ಮ ಅಹಂಕಾರಗಳನ್ನು ವೃದ್ಧಿಸುತ್ತವೆ. ಆದರೆ ಆತ್ಮ ವಿಮರ್ಶೆ ವ್ಯಕ್ತಿಯ ಅಂತರಂಗವನ್ನು ಹಸನು ಗೊಳಿಸಿ ವ್ಯಕ್ತಿತ್ವವನ್ನು ವಿಕಸನ ಗೊಳಿಸುತ್ತದೆ. ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲ ಸಂಗಮ ದೇವಾ ಎಂದು ಬೇಡಿಕೊಳ್ಳುವ ಬಸವಣ್ಣನವರ ನುಡಿ ಅವರ ಬದುಕಿನ ಮಹತ್ವಾಕಾಂಕ್ಷೆಯನ್ನು ತೋರುತ್ತದೆ. ಸದಾ ಕಾಲವೂ ಹೊಗಳಿಕೆ, ಮುಖಸ್ತುತಿಗಳನ್ನು ನಿರಾಕರಿಸುತ್ತಲೇ ಬಂದಿರುವ ಬಸವಣ್ಣ ಅವುಗಳನ್ನು ಹೊನ್ನ ಶೂಲ ಎಂಬುದಾಗಿ ಭಾವಿಸಿದ್ದು ಅತ್ಯಂತ ಅರ್ಥಪೂರ್ಣ ರೂಪಕವಾಗಿದೆ. ಮುಖಸ್ತುತಿ ಹೊಗಳಿಕೆಗಳ ಅಡ್ಡ ಪರಿಣಾಮಗಳನ್ನು ಅರಿತು ಬಾಳಿದವರು. ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ ಎನ್ನುವಮೂಲಕ ಅವರು ಅಂತರಾತ್ಮಕ್ಕೆ ಆವರಿಸಿದ ಲೋಪ ದೋಷಗಳನ್ನು ಕೂಡಲ ಸಂಗಯ್ಯನ ಮುಂದೆ ಅರಿಕೆ ಮಾಡಿಕೊಂಡವರಾಗಿದ್ದಾರೆ. ತನ್ಮೂಲಕ ತ್ಮ್ಮ ಲೋಪದೋಷಗಳನ್ನು ಹೊರಹಾಕಿ ಪರಿಶುದ್ಧಾತ್ಮರಾಗುತ್ತಾರೆ. ಅವರ ಇಡೀ ವಚನ ಭಂಡಾರವೇ ಆತ್ಮವಿಮರ್ಶೆಯ ಮಂಥನದಿಂದ ಹೊರ ಹೊಮ್ಮಿವೆ. ಕೂಡಲ ಸಂಗಮ ಅವರ ಅಂತರಾತ್ಮ. ಅಲ್ಲಿ ನಡೆದ ಆತ್ಮಾವಿಮರ್ಶೆಯ ಅಭಿವ್ಯಕ್ತಿ ರೂಪವೇ ಅವರ ವಚನಗಳು. ಅವು ಲಿಂಗ ಮೆಚ್ಚಿ ಅಹುದ ಹುದೆನ್ನುವಂತಾದಾಗ ಲೋಕ ಮಾನ್ಯತೆ ಪಡೆಯುವಂತಾದವು.
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯ ನಿಮ್ಮ ಧರ್ಮ.
ಆನು ಭಕ್ತ ನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದೊಡೆ,
ನಿಮಗಾನು ದ್ರೋಹಿಯಾದೆನಯ್ಯ.
ಕೂಡಲ ಸಂಗಮ ದೇವಾ,
ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯ...
ಎಂಬ ವಚನದಲ್ಲಿ ಅವರು ಭಗವಂತನನ್ನು ಸಾಕ್ಷಿಯಾಗಿರಿಸಿಕೊಂಡು ಆಡಿದ ನುಡಿಗಳು ಅತ್ಯಂತ ಭಾವನಾತ್ಮಕವಾದವುಗಳು. ಸಂತ ಶರಣರು ಅನುಭಾವಿಗಳು ಮೆಚ್ಚುವಂತೆ ನಡೆ ನುಡಿಯಿರಬೇಕು, ಶರಣರಿಗೆ ಒಳಿತನ್ನು ಬಯಸುವಂತಿರಬೇಕು. ಎಂಬ ಭಾವ ಇಲ್ಲಿ ವ್ಯಕ್ತವಾಗಿದೆ. ಮಾತು ಬಹಿರಂಗವಾದರೆ, ಮನಸು ಅಂತರಂಗ. ಇವೆರಡನ್ನೂ ಸ್ಪಟಿಕದ ಶಲಾಕೆಯಂತೆ ಪರಿಶುದ್ಧ ಹಾಗೂ ಪಾರದರ್ಶಕವಾಗಿರಿಸಿದ ಶ್ರೇಯಸ್ಸು ಬಸವಣ್ಣನವರದು. ಪ್ರತಿನಿತ್ಯ ನಮ್ಮ ಬದುಕಿನಲ್ಲಿ ನಾವು ವಾಸಿಸುವ ಸ್ಥಳಶುದ್ಧಿಯನ್ನು ಮಾಡಿಕೊಂಡರೆ ಸಾಲದು, ಶರೀರ ಮತ್ತು ಮನಸುಗಳು ಇಹ ಪರ ಸಾಧನೆಗೆ ಮಹತ್ವದ ಸಾಧನೆಗಳು. ಅವುಗಳ ಸ್ವಾಸ್ಥ್ಯ ಪ್ರತಿಯೊಬ್ಬರ ಹೊಣೆ.ಮನಸನ್ನು ಕಂಗೆಡಿಸಿ ವಿಕೃತಗೊಳಿಸುವ ಸಾಧನಗಳು ಪ್ರಪಂಚದಲ್ಲಿ ಅನೇಕ. ಆದರೆ ಚಿತ್ತ ನಿಶ್ಚಲಗೊಳಿಸಿ ಮನಸು ಭಗವಂತನಲ್ಲಿ ನೆಲೆಗೊಳ್ಳುವಂತೆ ಮಾಡಲು ಇರುವ ಏಕೈಕ ಸಾಧನ ಅದೇ ಆತ್ಮಾವಲೋಕನ. ನಿಶಿದ್ಧ ವಸ್ತು ಹಾಗೂ ನಿಶಿದ್ಧ ಪದಾರ್ಥಗಳನ್ನು ದೇವಾಲಯದಲ್ಲಿರಿಸಲು ನಿರಾಕರಿಸಿದಂತೆಯೇ, ಶರೀರ ಹಾಗೂ ಮನಸನ್ನು ವಿಕಾರಗೊಳಿಸುವ ವಿಚಾರಗಳನ್ನು ದೇಹವೆಂಬ ದೇವಾಲಯದಿಂದ ದೂರವಿಸ ಬೇಕು. ವಸ್ತ್ರ ಮಲಿನವಾಗುವದೆಂಬ ಕಾರಣ ದಿಂದ ಕೊಳೆಯಿರುವ ಜಾಗದಲ್ಲಿ ಯಾರೂ ವಿರಮಿಸುವದಿಲ್ಲ. ಅಂತೆಯೇ ದೇಹವೆಂಬ ದೇಗುಲದಲ್ಲಿ ವಿಕಾರಗಳು ಆವರಿಸಿದಲ್ಲಿ ಅಂತಹ ಶರೀರ ಶಿವನ ವಾಸಕ್ಕೆ ಯೋಗ್ಯವಾಗಲಾರದು. ಕಾಯ ವಿಕಾರ ನೀಗಿದಾಗ ಮಾತ್ರ ದೇಹ ದೇವಾಲವಾಗಲು ಸಾಧ್ಯ. ಕನ್ನಡಿಯ ಮುಂದೆ ನಿಂತು ಶರೀರದ ಓರೆ ಕೋರೆಗಳನ್ನು ತಿದ್ದಿಕೊಳ್ಳುವ ರೀತಿಯಲ್ಲಿಯೇ, ಆತ್ಮಾವಲೋಕನ ಹಾಗೂ ಆತ್ಮ ವಿಮರ್ಶೆಯ ಮೂಲಕ ತಮ್ಮ ಅಂತರಂಗದ ಶುದ್ಧಿಯನ್ನೂ ಮಾಡಿಕೊಳ್ಳ ಬೇಕು. ಇಲ್ಲಿ ಶಿವಾರ್ಚನೆ ಪೂಜಿಸಿ ವರ ಪಡೆಯುವ ಸಾಧನವಲ್ಲ. ಬದಲಿಗೆ ಅಂತರಂಗದಲ್ಲಡಗಿದ ಮನಸಿನ ವಿಕಾರವನ್ನು ಕಳೆದು ಅಂತರಂಗವನ್ನು ಶುದ್ಧಿಗೊಳಿಸುವ ಸಾಧನವೂ ಹೌದು. ಬಸವಣ್ಣ ಈ ಮಹತ್ತರ ಸಾಧನೆಯ ಮೂಲಕ ಲೋಕದ ಬದುಕಿಗೆ ಆದರ್ಶರಾದವರು ಜಗಜ್ಯೋತಿ ಬಸವೇಶ್ವರರು.