

ಎನ್.ಆರ್.ಪುರ: ವಿಶ್ವಗುರು ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಾಗಿದೆ ಎಂದು ಕಡೂರಿನ ಪ್ರಾಧ್ಯಾಪಕ ಡಾ. ಜಿ.ವಿ.ಮಂಜುನಾಥ್ ಹೇಳಿದರು.
ತಾಲೂಕಿನ ಮೆಣಸೂರು ಗ್ರಾಮದ ಬಸವ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ದಲಿತರು, ಶೋಷಣೆಗೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಸವಣ್ಣ ಪ್ರಯತ್ನಿಸಿದರು. ಅನುಭವ ಮಂಟಪಕ್ಕೆ ಶೋಷಿತ ಸಮಾಜದ ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಕಾಯಕವೇ ಕೈಲಾಸ ಎಂದು ವಚನಗಳ ಮೂಲಕ ತಿಳಿಸಿದರು. ದಾಸೋಹ ಪರಿಕಲ್ಪನೆಗೆ ಹೊಸ ಅಯಾಮವನ್ನು ನೀಡಿದರು. ಶಿವಶರಣರು ರಚಿಸಿದ ವಚನಗಳು ಬದುಕಿಗೆ ದಾರಿದೀಪವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಪರಿವರ್ತನೆ ತಂದು ಶೋಷಿತರು, ಧ್ವನಿಯಿಲ್ಲದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಬಸವಣ್ಣನವರ ಕಾರ್ಯ ಪ್ರಮುಖವಾಗಿದೆ. ಎಲ್ಲಾ ಕಸುಬುಗಳು ಸಮಾನವಾಗಿದೆ. ಯಾವುದೇ ಕಸುಬು ಮೇಲ್ಲಲ್ಲ, ಕೀಳಲ್ಲ. ಎಲ್ಲರೂ ಕೆಲಸ ಮಾಡಿ ಬದುಕ ಬೇಕೆಂದರು. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು ಎಂದರು.
ಸಾನ್ನಿಧ್ಯ ವಹಿಸಿದ್ದ ಮೆಣಸೂರು ಬಸವ ಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿ ಆಚರಿಸಿದರು. ಇವರು ಮಹಾತ್ಮ ಗಾಂಧೀಜಿಯವರಿಗೆ ಬಸವಣ್ಣರ ಬಗ್ಗೆ ತಿಳಿಸಿಕೊಟ್ಟರು. ಬಸವಣ್ಣ ಅವರ ಚಿಂತನೆಗಳನ್ನು ಅಳವಡಿಸಿಕೊಂಡರೆ ವಿಶ್ವವನ್ನೇ ಬದಲಾವಣೆ ಮಾಡಲು ಸಾಧ್ಯ ಎಂದು ಗಾಂಧೀಜಿ ಹೇಳಿದ್ದರು ಎಂದರು.
12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿದರು. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸ್ವಾತಂತ್ರೃ, ಹಕ್ಕುಗಳನ್ನು ನೀಡಿದರು ಎಂದರು.
ಮೆಣಸೂರು ಬಸವಕೇಂದ್ರದ ಅಧ್ಯಕ್ಷ ಶಾಂತರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ಬಸವ ಕೇಂದ್ರದ ಸಮುದಾಯ ಭವನ ಪೂರ್ಣಗೊಳಿಸಲು ಶಾಸಕರು ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಸದಸ್ಯರಾದ ಜುಬೇದಾ, ಕಾಂಗ್ರೆಸ್ ಮುಖಂಡರಾದ ಬಿ.ವಿ.ಉಪೇಂದ್ರ, ಅಂಜುಮ್, ಮುರುಘಾ ಮಠದ ಸಂಚಾಲಕ ಪುಟ್ಟಸ್ವಾಮಿ, ಎಚ್.ಎನ್.ರವಿಶಂಕರ್, ವೈ.ಎಸ್.ರವಿ, ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ, ಹಾಲಪ್ಪ, ಚನ್ನಪ್ಪ, ಆಂಜನೇಯ, ಸೋಮೇಶ್ ಇತರರಿದ್ದರು.