

ಬಸವತತ್ತ್ವ ಮತ್ತು ಶರಣಸಂಸ್ಕೃತಿ ಪ್ರಚಾರ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಬೀದರ್ ಜಿಲ್ಲೆ ಹುಲಸೂರದ ಶ್ರೀ ಗುರುಬಸವೇಶ್ವರ ಸಂಸ್ಥಾನಮಠ, ತತ್ತ್ವ-ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಜನಮನದಲ್ಲಿ ಶರಣಪರಂಪರೆಯನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿದೆ.
ಮಠದ ಹಿನ್ನೆಲೆ: ಅಲ್ಲಮಪ್ರಭುಗಳಿಂದ ಸ್ಥಾಪನೆಯಾದ ಈ ವಿರಕ್ತಮಠದ 19ನೇ ಪೀಠಾಧಿಪತಿ ಜಗದ್ಗುರು ಶ್ರೀ ಬಸವಕುಮಾರ ಶಿವಯೋಗಿಗಳು. ಚಿಕ್ಕಮಗಳೂರ ಜಿಲ್ಲೆಯಲ್ಲಿ ಹುಟ್ಟಿ, ಶಿವಯೋಗ ಮಂದಿರದಿಂದ ಯೋಗಸಾಧನೆ ಪಡೆದು, ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಗಳು, ಉತ್ತರಪ್ರದೇಶದ ಪ್ರಯಾಗದಲ್ಲಿ ಯೋಗಪ್ರದರ್ಶನ ಮಾಡಿ ಯೋಗಿರಾಜ ಬಿರುದು ಪಡೆದಿದ್ದರು. ಶರಣತತ್ತ್ವ ಬೋಧಿಸುವ ಮೂಲಕ ಮನಸುಗಳನ್ನು ಬೆಳಗಿಸಿದ ಶ್ರೀ ಬಸವಕುಮಾರ ಶಿವಯೋಗಿಗಳು ಮಠ ಕಟ್ಟುವಲ್ಲಿ ಮಹತ್ವದ ಕೊಡುಗೆ ನೀಡಿದವರು.
ಇವರ ನಂತರ 1981ರಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿಯವರು ಮಠದ ಪರಂಪರೆ ಮುಂದುವರಿಸುವುದರ ಜತೆಗೆ ಹತ್ತು ಹಲವು ಕಾರ್ಯಯೋಜನೆ ಮೂಲಕ ಸಂಸ್ಥಾನಮಠದ ಕಾರ್ಯಗಳನ್ನು ವಿಸ್ತರಿಸಿದ್ದಾರೆ. ಅವರು ಅಪ್ಪಟ ಬಸವತತ್ತ್ವ ನಿಷ್ಠರು. ಪ್ರಚಾರಕ್ಕೆ ಸೀಮಿತವಾಗದೆ ನಡೆಯಲ್ಲಿ ರೂಢಿಸಿಕೊಳ್ಳಬೇಕು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು. ಸರಳ ಜೀವನ ರೂಢಿಸಿಕೊಂಡಿರುವ ಶ್ರೀಗಳು ಎಲ್ಲರೊಂದಿಗೆ ಬೆರೆತು ಶರಣತತ್ತ್ವದ ಆಶಯಗಳನ್ನು ತಿಳಿಸುತ್ತ ಮನಸುಗಳನ್ನು ಬೆಸೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಸವತತ್ತ್ವ, ವಚನಸಾಹಿತ್ಯದಲ್ಲಿ ಅದರ್ಶ ಬದುಕಿನ ಸೂತ್ರಗಳಿವೆ. ಮನುಕುಲದ ಎಲ್ಲ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ. ಈ ತತ್ತ್ವ ಸಿದ್ಧಾಂತಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ಸದ್ಭಾವನೆ ಗಟ್ಟಿಗೊಳಿಸಬೇಕು ಎಂಬ ಸದಾಶಯದೊಂದಿಗೆ ಸ್ವಾಮೀಜಿ ಎರಡನೇ ಬಾರಿ ಪಾದಯಾತ್ರೆ ಮೂಲಕ ದೇಶ ಸುತ್ತಿ ಮಾರ್ಚ್ 22ಕ್ಕೆ ಕಲ್ಯಾಣಕ್ಕೆ ಆಗಮಿಸುತ್ತಿದ್ದಾರೆ. ವಿಶ್ವಕ್ಕೆ ಸಮತೆ ಸಂದೇಶ ಸಾರಿದ, ಜಗತ್ತಿನಲ್ಲಿ ಮೊದಲಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ನೆಲ ಕಲ್ಯಾಣ. ಇಲ್ಲಿಂದ ಬಸವಜಯಂತಿ (7 ಮೇ 2019) ದಿನ ಬಸವಜ್ಯೋತಿ ಸದ್ಭಾವನ ಪಾದಯಾತ್ರೆ ಆರಂಭಿಸಿದ್ದ ಶ್ರೀಗಳು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶದ ಮೂಲಕ ನೆರೆರಾಷ್ಟ್ರ ನೇಪಾಳದಲ್ಲೂ ಸಂಚರಿಸಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳದಿಂದ ಜನವರಿ 13ರಂದು ರಾಜ್ಯಕ್ಕೆ ಪ್ರವೇಶಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 10,500 ಕಿಲೋಮೀಟರ್ ಸಂಚರಿಸಿ ಮೈಸೂರು ಜಿಲ್ಲೆ ಎಚ್ಡಿ ಕೋಟೆಯ ಡಿಬಿಕುಪ್ಪೆಯಲ್ಲಿ ಆಗಮಿಸಿದ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 2500 ಕಿ.ಮೀ. ಸಂಚರಿಸಿ 22ರಂದು ಕಲ್ಯಾಣಕ್ಕೆ ಆಗಮಿಸಲಿದ್ದು, ಅದ್ಧೂರಿ ಸ್ವಾಗತಕ್ಕಾಗಿ ಸಿದ್ಧತೆಗಳು ನಡೆದಿವೆ.
ತಮ್ಮ ದಾಖಲೆ ತಾವೇ ಮುರಿದರು: ಬಸವತತ್ತ್ವ ಪ್ರಚಾರಕ್ಕಾಗಿ ಈ ಮೊದಲು ಏಳು ತಿಂಗಳಲ್ಲಿ 9000 ಕಿ.ಮೀ. ಪಾದಯಾತ್ರೆ ನಡೆಸಿದ್ದ ಶ್ರೀಗಳು ಈಗ ಎರಡನೇ ಸಲ 10 ತಿಂಗಳು 15 ದಿನಗಳಲ್ಲಿ 13000 ಕಿ.ಮೀ. ಪಾದಯಾತ್ರೆ ನಡೆಸಿ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. 2011ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಸವಜ್ಯೋತಿ ಸಂದೇಶ ಯಾತ್ರೆ ನಡೆಸಿದ್ದರು. ಬಸವತತ್ತ್ವ ಪ್ರಚಾರದ ಜತೆಗೆ ವ್ಯಸನಮುಕ್ತ ಸಮಾಜ ನಿರ್ವಣದ ಆಶಯ ಹೊತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರು. ಈಗ ದೇಶದ ವಿವಿಧ ರಾಜ್ಯಗಳ ಜತೆಗೆ ನೆರೆಯ ನೇಪಾಳದಲ್ಲೂ ಪಾದಯಾತ್ರೆ ನಡೆಸಿದ್ದು ವಿಶೇಷ. ಪ್ರಚಾರದ ಜತೆಗೆ ಕನ್ನಡದ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವ ಶ್ರೀಗಳು ಕರ್ನಾಟಕ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಗಡಿ ಭಾಗದ 50 ಹಳ್ಳಿಗಳಲ್ಲಿ ಸಂಚರಿಸಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಿಂದೊಮ್ಮೆ ಕದಳಿವನದವರೆಗೆ ಸದ್ಭಾವನಾ ಪಾದಯಾತ್ರೆ ನಡೆಸಿದ್ದರು.
ಪಾದಯಾತ್ರೆಯಲ್ಲಿ...: ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸುವ ವೇಳೆ ಸ್ವಾಗತ ಸೇರಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಜನರಿಗೆ ಬಸವತತ್ತ್ವ ಮತ್ತು ವಚನಸಾಹಿತ್ಯದ ಬಗ್ಗೆ ಹೇಳುತ್ತ ಕರಪತ್ರ, ಪುಸ್ತಕಗಳನ್ನು ವಿತರಿಸಲಾಗಿದೆ. ಹಲವೆಡೆ ರುದ್ರಾಕ್ಷಿ ಮತ್ತು ವಿಭೂತಿ ನೀಡಿ ಅದರ ಮಹತ್ವ ತಿಳಿಹೇಳಲಾಗಿದೆ. ಶ್ರೀಗಳ ವಾಹನ ಚಾಲಕ ನಾಗಶೆಟ್ಟಿ ತಾಳಮಡಗಿ, ಸಹಾಯಕ ಸಂಗೇಶ ಬ್ಯಾಲಹಳ್ಳಿ ಶ್ರೀಗಳ ಜತೆಗಿದ್ದಾರೆ.
ಶ್ರೀಗಳ ಸಾಹಿತ್ಯಾಸಕ್ತಿ
ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಶ್ರೀಗಳು ಮೂರು ನಾಟಕಗಳನ್ನು ಬರೆದಿದ್ದಾರೆ. ವಚನ ಶಿವಾ ಕೃತಿ, ಕನ್ನಡ ಕೋಗಿಲೆ ಕವನ ಸಂಕಲನ, ಕಲ್ಯಾಣ ಕೈಲಾಸ ತತ್ತ್ವಪದಗಳ ಕೃತಿಗಳು ಪ್ರಕಟವಾಗಿವೆ. ದೇಶಸಂಚಾರದ ವೇಳೆ ತಮ್ಮ ಅನುಭವಗಳನ್ನು ಒಳಗೊಂಡ ಬಸವ ಭಾರತ ಕೃತಿ ರಚಿಸಿದ್ದಾರೆ.
ಬಸವ ಸ್ಮಾರಕಕ್ಕೆ ನೇಪಾಳದಲ್ಲಿ ಸ್ಥಳ
ಶ್ರೀ ಶಿವಾನಂದ ಮಹಾಸ್ವಾಮೀಜಿ ಅವರ ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆಗೆ 2019ರ ಆಗಸ್ಟ್ನಲ್ಲಿ ನೇಪಾಳದಲ್ಲಿ ಹಲವೆಡೆ ಸ್ವಾಗತಿಸಿ ಬರಮಾಡಿಕೊಳ್ಳಲಾಗಿತ್ತು. ಜತೆಗೆ ಬಸವ ಸ್ಮಾರಕ ನಿರ್ಮಾಣ ಮತ್ತು ಬಸವತತ್ತ್ವ ಪ್ರಚಾರ-ಪ್ರಸಾರ ಕಾರ್ಯಕ್ಕೆ ನೇಪಾಳದಲ್ಲಿ ಹತ್ತು ಎಕರೆ ಜಮೀನು ಮಂಜೂರಿಗೆ ಅಲ್ಲಿನ ಮೇಯರ್ ಒಬ್ಬರು ವಾಗ್ದಾನ ಮಾಡಿದ್ದಾರೆ. ಬಸವತತ್ತ್ವ ಪ್ರಚಾರ-ಪ್ರಸಾರಕ್ಕಾಗಿಯೇ ದೇವಘರ್ ಬಳಿ ಜಮೀನು ಕಲ್ಪಿಸುವ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರದಿಂದ ಅನುಮೋದನೆ ಪಡೆಯಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದು, ಶ್ರೀಗಳಿಗೆ ಸ್ಥಳವನ್ನೂ ತೋರಿಸಿದ್ದಾರೆ.
ಮಾರ್ಥಂಡ ಜೋಶಿ ಬಸವಕಲ್ಯಾಣ