ಚುನಾವಣೆಯಲ್ಲಿ ಬಸವ ಸೇನೆ ಅಭ್ಯರ್ಥಿಗಳನ್ನು ಗೆಲ್ಲಿಸಿ

basava sene
Published on

ಶಿವಮೊಗ್ಗ: ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಚುನಾವಣೆ ಡಿ.22ರಂದು ನಡೆಯಲಿದ್ದು, ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಬಸವ ಸೇನೆ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಎಚ್.ವಿ.ಮಹೇಶ್ವರಪ್ಪ ಮನವಿ ಮಾಡಿದರು.

ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘವು ಪ್ರತಿಷ್ಠಿತ ಸಹಕಾರ ಸಂಘ. 1,623 ಮತದಾರರಿದ್ದು, ಸುಸ್ತಿ ಮತ್ತು ಇತರ ಕಾರಣಗಳಿಂದ ಹಲವು ಸದಸ್ಯರನ್ನು ಮತದಾನದಿಂದ ದೂರ ಇಡಲಾಗಿದೆ. ಒಟ್ಟು 13 ಸ್ಥಾನಗಳಿದ್ದು, ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸವ ಸೇನೆ ತಂಡವನ್ನು ಹಿರಿಯರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ರಚಿಸಲಾಗಿದೆ. ಉತ್ತಮ ಕೆಲಸಗಾರರನ್ನೇ ಆಯ್ಕೆ ಮಾಡಲಾಗಿದೆ. ಹಳಬರು ಮತ್ತು ಹೊಸಬರಿಗೂ ಅವಕಾಶ ಕಲ್ಪಿಸಲಾಗಿದೆ. ಮಾಜಿ ಅಧ್ಯಕ್ಷ ಎಂ.ಆರ್.ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್, ಜಿಪಂ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಸಂಘದ ಮಾಜಿ ಉಪಾಧ್ಯಕ್ಷ ಕಾಯಕಯೋಗಿ ಬಿ.ಚನ್ನಬಸಪ್ಪ ಮತ್ತು ಪ್ರಮುಖರಾದ ಮೋಹನ, ಸಿ.ಮಹೇಶಮೂರ್ತಿ, ಪ್ರಭು ವಾರದ್, ಎಚ್.ಸಿ.ಬಸವರಾಜ್, ಎಚ್.ಎಸ್.ಮಂಜುನಾಥ್, ಎಚ್.ವಿ.ಮರುಳೇಶ್, ಬಿ.ಚನ್ನಬಸಪ್ಪ, ಆರತಿ ಸತೀಶ್ ತಂಡದಲ್ಲಿದ್ದಾರೆ ಎಂದರು.

ಮಾಜಿ ಅಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, ಹಿರಿಯರಾದ ಮಹೇಶ್ವರಪ್ಪ, ಮೂರ್ತಿ ಮತ್ತು ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿದೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಸೇವೆ ಸಲ್ಲಿಸುವ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇವೆ ಎಂದು ಹೇಳಿದರು.

ನಾನು ಅಧಿಕಾರಕ್ಕೆ ಬಂದ ಮೇಲೆ ಹಲವು ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದ್ದೇನೆ. ಸಂಘಕ್ಕೆ ನಿವೇಶನ ಪಡೆಯುವುದು ಸೇರಿ ಸಹಕಾರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ 1.50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಪೂರ್ಣಗೊಳಿಸಿದ್ದೇವೆ. ಸದಸ್ಯರ ಅನುಕೂಲಕ್ಕಾಗಿ ಎಲ್ಲ ರೀತಿ ಸಾಲ ನೀಡಲಾಗಿದೆ. ಸುಸ್ತಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಬಸವಸೇನೆ ತಂಡದಿಂದ ಹಲವು ಯೋಜನೆಗಳು ನಮ್ಮ ಮುಂದಿವೆ. ಗೃಹ ನಿರ್ಮಾಣಕ್ಕೆ ಸಾಲ, ಲಾಕರ್ ಸೌಲಭ್ಯ, ಜಾಮೀನು ಸಾಲದ ಮಿತಿ ಹೆಚ್ಚಳ, ವಾಹನ ಖರೀದಿ ಸೇರಿ ಇತರ ಸಾಲಗಳನ್ನು ಹೆಚ್ಚಿಸುವುದು, ಸದಸ್ಯರ ಮಕ್ಕಳಿಗೆ ಆದ್ಯತೆ ಹೀಗೆ ಹಲವು ಯೋಜನೆಗಳ ಮೂಲಕ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಉದ್ದೇಶವಿದೆ. ಆದ್ದರಿಂದ ನಮ್ಮ ತಂಡದ ಎಲ್ಲ 12 ನಿರ್ದೇಶಕರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಸಂಘದ ಹಿರಿಯರಾದ ಎಸ್.ಪಿ.ಜಗನ್ನಾಥ್, ವಿ.ಸಿ.ಎಸ್.ಮೂರ್ತಿ, ಆನಂದವಾಲಿ ಹಾಗೂ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net