

ಮೂಡಿಗೆರೆ: ಸಮಾಜ ಸುಧಾರಕರಾಗಿ ಕಾಯಕ ನಿಷ್ಠೆ ತೋರಿದ ಬಸವಣ್ಣ ವಿಶ್ವದ ಪ್ರಬಲ ಶಕ್ತಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಮೋಹನ ರಾಜಣ್ಣ ಹೇಳಿದರು.
ಗೋಣಿಬೀಡಿನಲ್ಲಿ ಶುಕ್ರವಾರ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಹೊಯ್ಸಳ ಜೆಸಿಐ ಘಟಕದಿಂದ ಏರ್ಪಡಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ಶ್ರೀಮಂತಿಕೆಯ ಜೀವನವಿದ್ದರೂ ಸಮಾಜದ ದೋಷ ಸರಿಪಡಿಸಲು ಜೀವನ ಮುಡಿಪಾಗಿಟ್ಟುಕೊಂಡು ಅನುಭವ ಮಂಟಪದ ಮೂಲಕ ಎಲ್ಲ ವರ್ಗದವರನ್ನು ಒಂದೆಡೆ ಸೇರಿಸಿ ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಿ ಕೊಟ್ಟರು. ಬಸವಣ್ಣ ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡಿ ದೇಶದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ, ಬಸವಣ್ಣ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸಮಾನತೆ ಸಾರುವಂಥ ಆದರ್ಶ ಸಮಾಜದ ನಿರ್ಮಾಣ ಬಯಸಿದ್ದರು. ವರ್ಣ, ವರ್ಗ, ಜಾತಿರಹಿತ ಸುಂದರ ಸಮಾಜದ ಕಲ್ಪನೆಯನ್ನು 12ನೇ ಶತಮಾನದಲ್ಲಿ ಅನುಷ್ಠಾನಕ್ಕೆ ತಂದಿದ್ದರು. ಆದರೆ ಇದುವರೆಗೂ ಸಮರ್ಪಕವಾಗಿ ಜಾರಿಯಾಗದಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಹೊಯ್ಸಳ ಜೆಸಿಐ ಘಟಕದ ಅಧ್ಯಕ್ಷ ಎಚ್.ಜಿ.ಆದರ್ಶ ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಮೇರುಘಟ್ಟವಾಗಿದೆ. ವಚನಗಳ ಸಾರ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಬಿ.ಎಂ.ಜಗತ್, ರಾಜಣ್ಣ, ಚಂದ್ರಶೇಖರ್, ಜಿ.ಆರ್.ಪರಮೇಶ್, ಸುಬ್ಬಣ್ಣ, ದೇವರಾಜ್, ಗಂಗಾಧರ ಇತರರಿದ್ದರು.