

ವಿಜಯಪುರ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಗೆದ್ದು ಬಂದು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಯೊಬ್ಬ ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.
ಬಸವರಾಜ ಮರೋಳ ಎಂಬ ಅಭಿಮಾನಿ, ಬಸವನ ಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದಿಂದ ಸುಮಾರು ನಾಲ್ಕು ಕಿಲೋಮೀಟರ್ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.
ಸದ್ಯ ಮೀಸಲಾತಿ ವಿಚಾರವಾಗಿ ಬಸನಗೌಡ ಪಾಟೀಲ್ ಸದಾ ಸುದ್ದಿಯಲ್ಲಿದ್ದಾರೆ. ಜತೆಗೆ ಸಚಿವ ಮುರುಗೇಶ್ ನಿರಾಣಿ ವಿಚಾರವಾಗಿ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದು, ರಾಜ್ಯರಾಜಕಾರಣದಲ್ಲಿ ಇವರಿಬ್ಬರ ಜಗಳ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಗೆ ತಲೆನೋವಾಗಿದೆ ಎಂದರೆ ತಪ್ಪಲ್ಲ.
ನಿರಾಣಿ ವಿರುದ್ಧ ಪದೇ ಪದೇ ಯತ್ನಾಳ್ ಹೇಳಿಕೆ ನೀಡಿದರೂ ಹೈಕಮಾಂಡ್ ಮಾತ್ರ ಮೌನವಹಿಸಿದೆ. ಇದು ಮುರುಗೇಶ್ ನಿರಾಣಿಗೆ ಭಾರೀ ಮುಜುಗರ ತಂದಿದೆ. ಸದ್ಯ ಯತ್ನಾಳ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರಿಗೆ ಯತ್ನಾಳ್ ವಿರುದ್ಧ ನಿರಾಣಿ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮುರುಗೇಶ್ ನಿರಾಣಿ ಸೇರಿದಂತೆ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಪಕ್ಷದ ಹಿರಿಯ ನಾಯಕರ ವಿರುದ್ಧ ಸಾರ್ವಜನಿಕವಾಗಿ ಮುಜುಗರ ತರುವಂತಹ ಟೀಕೆ ಮಾಡುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ನೀಡಿದೆ ಎನ್ನಲಾಗಿತ್ತು. ಆದರೆ ಯತ್ನಾಳ್ ಮಾತನಾಡುತ್ತಾ, ನನಗೆ ಯಾವುದೇ ಶಿಸ್ತಿನ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.