ಅಂತರ್ಜಲ ಮಟ್ಟ ವೃದ್ಧಿಗೆ ಬ್ಯಾರೇಜ್ ಚೆಕ್ ಡ್ಯಾಮ್; ಉಪನದಿ, ದೊಡ್ಡಹಳ್ಳಗಳಿಗೆ ಅಡ್ಡಲಾಗಿ ನಿರ್ಮಾಣ

Front 2
Published on

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಒಣಭೂಮಿ ಪ್ರದೇಶ, ಕುಸಿಯುತ್ತಿರುವ ಅಂತರ್ಜಲ ಮಟ್ಟ ತಡೆಗಟ್ಟಲು ಹಾಗೂ ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ನಿಟ್ಟಿನಲ್ಲಿ ಉಪನದಿಗಳಿಗೆ, ದೊಡ್ಡ ಹಳ್ಳಗಳಿಗೆ ಅಡ್ಡಲಾಗಿ ಹೊಸದಾಗಿ ಬ್ಯಾರೇಜ್, ಬಾಂದಾರ, ಚೆಕ್ ಡ್ಯಾಮ್ಳ ನಿರ್ವಣಕ್ಕೆ ಸರ್ಕಾರ ಮುಂದಾಗಿದೆ. ಹತ್ತು ವರ್ಷಗಳ ಅವಧಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮಳೆ ನೀರು ಸಮರ್ಪಕ ಸಂಗ್ರಹವಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಏರುಪೇರಾಗಿದೆ. 227ರ ಪೈಕಿ 87 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದ್ದರೆ, 140 ತಾಲೂಕುಗಳಲ್ಲಿ ಏರಿಕೆ ಕಂಡಿದೆ. 40ಕ್ಕೂ ಹೆಚ್ಚು ತಾಲೂಕುಗಳಲ್ಲಿ ಒಣಭೂಮಿ ಪ್ರದೇಶವೂ ಹೆಚ್ಚಾಗಿದೆ. ಮತ್ತೊಂದೆಡೆ, ಕೆಲ ಪ್ರದೇಶಗಳ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡುಬಂದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಹೆಚ್ಚು ಆದ್ಯತೆ ನೀಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ನರೇಗಾ ಯೋಜನೆಯಲ್ಲಿ ಜಲಸಂಜೀವಿನಿ, ಜಲಾಮೃತ ಯೋಜನೆಗಳ ಮೂಲಕ ಕೆರೆಗಳು, ಹಳ್ಳ-ಕೊಳ್ಳಗಳನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಸಲು ಪ್ರಯತ್ನಿಸುತ್ತಿವೆ. ಇದೀಗ ಜಲಸಂಪನ್ಮೂಲ ಇಲಾಖೆ, ಕೃಷಿ, ತೋಟಗಾರಿಕೆ, ಆರ್​ಡಿಪಿಆರ್ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಉಪನದಿ, ದೊಡ್ಡ ದೊಡ್ಡ ಹಳ್ಳಗಳಿಗೆ ಅಡ್ಡಲಾಗಿ ಬ್ಯಾರೇಜ್, ಬಾಂದಾರ, ಚೆಕ್ ಡ್ಯಾಮ್ ನಿರ್ವಣಕ್ಕೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಈ ಸಂಬಂಧ ಎರಡು ಬಾರಿ ಇಲಾಖೆಗಳ ಸಭೆ ಕೂಡ ನಡೆದಿದೆ.

1,591 ಟಿಎಂಸಿ ಜಲ ಬೇಡಿಕೆ: ರಾಜ್ಯ ಜಲ ನೀತಿ-2022 ಪ್ರಕಾರ ಕೃಷಿ ಚಟುವಟಿಕೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ 2023ರ ವೇಳೆ ನೀರಿನ ಬೇಡಿಕೆ 1,591 ಟಿಎಂಸಿ ಗಳಾಗಬಹುದು. ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ತ್ಯಾಜ್ಯ ನೀರನ್ನು ಸಂಸ್ಕರಿಸಿ ವ್ಯವಸಾಯಕ್ಕೆ ಬಳಸಲು ಹಾಗೂ ಕೆರೆಗಳನ್ನು ತುಂಬಿಸಲು ಹಾಗೂ ಕೈಗಾರಿಕಾ ತ್ಯಾಜ್ಯ ನೀರು ಮತ್ತು ಉಷ್ಣಸ್ಥಾವರ ಯೋಜನೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ್ಜಲ ಮಟ್ಟ ವೃದ್ಧಿಸಲು ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೆ, ಸರ್ಕಾರವು ಜಲ ಸಂರಕ್ಷಣೆ ಮತ್ತು ಅದರ ನಿರ್ವಹಣೆಗಾಗಿ ಹೆಚ್ಚಿನ ಆದ್ಯತೆ ನೀಡಿ ಬಾಂದಾರ, ಚೆಕ್ ಡ್ಯಾಮ್ಳನ್ನು ನಿರ್ವಿುಸಲು ಕ್ರಮ ವಹಿಸಿದೆ. | ದರ್ಶನ್ ಎಚ್.ವಿ., ಜಿಪಂ ಸಿಇಒ

ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಳ: ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಗದಗ, ಮಂಡ್ಯ, ರಾಯಚೂರು, ವಿಜಯಪುರ, ವಿಜಯನಗರ ಜಿಲ್ಲೆಯ ಕೆಲವೆಡೆ ನೀರಿನಲ್ಲಿ ಕಂಡುಬಂದಿರುವ ಫ್ಲೋರೈಡ್ ಅಂಶ ಕಡಿಮೆ ಮಾಡಲು ನರೇಗಾ, ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಮತ್ತು ಇತರ ಇಲಾಖೆಗಳಿಂದ ಯೋಜನೆ ರೂಪಿಸಲಾಗುತ್ತಿದೆ. ಅಂತರ್ಜಲಮಟ್ಟ ಅಭಿವೃದ್ಧಿಪಡಿಸಿ ಫ್ಲೋರೈಡ್ ಕಡಿಮೆ ಮಾಡಲಾಗುತ್ತಿದೆ. ತಾತ್ಕಾಲಿಕ ಪರಿಹಾರಕ್ಕಾಗಿ 18,000ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಅಲ್ಲದೆ, 514 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, 63 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. 31 ಜಿಲ್ಲಾ ಕೇಂದ್ರಗಳಲ್ಲಿ ಮತ್ತು 48 ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರ್ವ ಹಿಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್​ಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net