ಬಾಲಕಿ ಬರ್ಬರ ಹತ್ಯೆ: ಬಿ.ವೈ.ವಿಜಯೇಂದ್ರ ಆಘಾತ

B Y Vijayendra
Published on

ಬೆಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾಳ ಹತ್ಯೆಯ ನೆರಳು ಸರಿಯುವ ಮುನ್ನವೇ ಕೊಡಗಿನಲ್ಲಿ ಮತ್ತೊಂದು ಪೈಶಾಚಿಕ ಘಟನೆ ವರದಿಯಾಗಿದೆ. ಮೀನಾ ಎಂಬ ವಿದ್ಯಾರ್ಥಿನಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಸಂಭ್ರಮದ ಕ್ಷಣ ಅನುಭವಿಸುತ್ತಾ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಕ್ರೂರವಾಗಿ ಕೊಲೆಯಾಗಿರುವುದು ಅಘಾತಕಾರಿ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರದಿಂದ ಕೊಲೆಗಡುಕರಿಗೆ, ದುಷ್ಟರಿಗೆ ಭಯವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳು ಭಯದಿಂದ ಬದುಕಬೇಕಾದ ದುಸ್ಥಿತಿ ತಂದೊಡ್ಡಿರುವ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಕಂಟಕ ಪ್ರಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ ನಿಯಂತ್ರಿಸಲಾಗದ ಕಾಂಗ್ರೆಸ್ ಸರ್ಕಾರ ತನ್ನ ಜಾಣ ನಿದ್ದೆಯಿಂದ ಎಚ್ಚರಗೊಂಡು ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಲಿ, ಇಲ್ಲವಾದರೆ ಸರಣೀ ಘಟನೆಗಳ ಹೊಣೆ ಹೊತ್ತು ರಾಜಿನಾಮೆ ನೀಡಿ ಹೊರಗೆ ಹೋಗಲಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net