

ಬೆಂಗಳೂರು: ಈ ಮಾಲೀಕ ಬ್ಯಾಂಕ್ ನಲ್ಲಿ ಮನೆ ಅಡವಿಟ್ಟು ಸಾಲ ತೆಗೆದುಕೊಂಡಿದ್ದ. ಆದರೆ ಈತ ಸಾಲ ತೀರಿಸದೇ ಇದ್ದದ್ದಕ್ಕೆ ಬರೆ ಬಿದ್ದದ್ದು ಮಾತ್ರ ಆ ಕಟ್ಟಡದಲ್ಲಿ ಲೀಜ್, ಮನೆ ಬಾಡಿಗೆಗೆ ಇದ್ದ ನಿವಾಸಿಗಳಿಗೆ. ಹೌದು ಈ ವಿಚಿತ್ರ ಘಟನೆ ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಐಶ್ವರ್ಯ ಅರ್ಪಾಟ್ಮೆಂಟ್ನ ಹಿಂದಿನ ಕಟ್ಟಡ ಶಿವನಹಳ್ಳಿಯ ಶಿವಣ್ಣ ಅಪಾರ್ಟ್ ಬಿಲ್ಡಿಂಗ್ನಲ್ಲಿ ನಡೆದಿದೆ.
ಬ್ಯಾಂಕ್ ನಲ್ಲಿ ಬರೋಬ್ಬರಿ 15 ಕೋಟಿ ಸಾಲ ತೆಗೆದುಕೊಂಡಿದ್ದ ಮನೆ ಮಾಲೀಕ ತೀರಿಸಲಾಗದೇ ಇದ್ದಾಗ ಸಹಜವಾಗಿ ಆಸ್ತಿ ಮುಟ್ಟುಗೋಲು ಹಾಕಲು ಸ್ಥಳಕ್ಕೆ ಬಂದಿದ್ದಾರೆ. Serf section 14 ನ್ಯಾಯಲಯದ ಆದೇಶದಂತೆ ಮನೆ ಸೀಜ್ ಮಾಡಲಾಗಿದೆ.
ಈ ಸಂದರ್ಭ ಒಟ್ಟು 29 ಮನೆಗಳನ್ನು ಬ್ಯಾಂಕ್ ಸಿಬ್ಬಂದಿಗಳು ಸೀಜ್ ಮಾಡಿದ್ದಾರೆ ಶಿವಣ್ಣ ಎನ್ನುವರಿಗೆ ಸೇರಿದ್ದ ಈ ಅರ್ಪಾಟ್ಮೆಂಟ್ನಿಂದ ಬರೋಬ್ಬರಿ 100 ಜನರನ್ನು ಹೊರಹಾಕಲಾಗಿದ್ದು ಜನರು ಚಿಂತಾಕ್ರಾಂತರಾಗಿದ್ದಾರೆ.
ಕೆನರಾ ಬ್ಯಾಂಕ್ ಈ ಮನೆಗಳ ಸೀಜ್ ಕಾರ್ಯಾಚರಣೆ ನಡೆಸಿದ್ದು ಇದರಿಂದಾಗಿ ಸುಮಾರು 29 ಕುಟುಂಬಗಳು ಬೀದಿಗೆ ಬಂದಿವೆ. ದಿಕ್ಕು ತೋಚದೆ ಬಾಡಿಗೆದಾರರು ಕಂಗಾಲಾಗಿದ್ದು ಮನೆಯಲ್ಲಿರುವ ಪ್ರತಿಯೊಂದು ಸಾಮಾಗ್ರಿಯ ಜೊತೆಗೆ ಬೀದಿಗೆ ಬಂದಿದ್ದಾರೆ. ಇದರಿಂದಾಗಿ ಬದುಕು ಮೂರಾಬಟ್ಟೆಯಾಗಿದೆ.
ಸದ್ಯಕ್ಕೆ ಬಾಡಿಗೆ ನಿವಾಸಿಗಳು ಮನೆಯ ಸಾಮಾಗ್ರಿಗಳನ್ನ ಬೀದಿಯಲ್ಲಿ ಇಟ್ಟಿದ್ದು ನಮ್ಮ ಹಣ ನಮಗೆ ವಾಪಾಸ್ ಕೊಟ್ಟುಬಿಡಿ ಅಂತ ಮಾಲೀಕರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಅಂತೂ ಈ ಮಾಲೀಕನ ಎಡವಟ್ಟಿಗೆ ಬಾಡಿಗೆ ಹಾಗೂ ಲೀಜ್ಗೆ ಇದ್ದ ಜನರು ಪರದಾಡಬೇಕಾಗಿ ಬಂದಿರುವುದು ಸತ್ಯ.