ಬ್ಯಾಂಕ್​ ಸಿಬ್ಬಂದಿಗೆ ಅಭಯ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Nirmala Sitharaman 8 dec 19
Nirmala Sitharaman
Published on

ನವದೆಹಲಿ: ಖಾಸಗೀಕರಣಗೊಳ್ಳುವ ಬ್ಯಾಂಕುಗಳ ಸಿಬ್ಬಂದಿಯ ಹಿರರಕ್ಷಣೆಯನ್ನು ಖಂಡಿತವಾಗಿಯೂ ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಂಗಳವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಖಾಸಗೀಕರಣಕ್ಕೆ ಒಳಗಾಗಿರುವ ಹಾಗೂ ಒಳಗಾಗುತ್ತಿರುವ ಬ್ಯಾಂಕುಗಳ ಸಿಬ್ಬಂದಿಯ ಸಂಬಳ, ಪಿಂಚಣಿ, ಸೇವಾ ಭದ್ರತೆ ಸೇರಿದಂತೆ ಇನ್ನಿತರ ಪ್ರಮುಖ ಅಗತ್ಯಗಳನ್ನು ಖಂಡಿತವಾಗಿಯೂ ನೋಡಿಕೊಳ್ಳಲಾಗುವುದು. ಈ ವಿಷಯದಲ್ಲಿ ಬ್ಯಾಂಕ್​ ನೌಕರರಿಗೆ ಯಾವುದೇ ಸಂದೇಹ ಬೇಡ ಎಂದು ಸೀತಾರಾಮನ್ ಮನವಿ ಮಾಡಿದ್ದಾರೆ.

ನಾವು ಎಲ್ಲ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೋಗುತ್ತಿಲ್ಲ. ಆರ್​ಬಿಐ ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ. ಆದರೆ, ಬ್ಯಾಂಕ್ ನೌಕರರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ

ಬ್ಯಾಂಕುಗಳ ಖಾಸಗೀಕರಣವೂ ದೇಶದ ಕೆಲವೇ ಶ್ರೀಮಂತರಿಗೆ ಲಾಭ ಮಾಡಿ ಕೊಡುವ ಮೋದಿ ಸರ್ಕಾರದ ಮತ್ತೊಂದು ಅಜೆಂಡಾ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂದಿರಾ ಗಾಂಧಿ ಅವರು ಬಡವರಗೆ, ಜನ ಸಾಮಾನ್ಯರಿಗೆ ಬ್ಯಾಂಕುಗಳ ಲಾಭ ಸಿಗಲಿ ಎಂದು ದೇಶದ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಆದರೆ ಇಂದು ಒಂದರ ಹಿಂದೆ ಮತ್ತೊಂದು ಬ್ಯಾಂಕ್​ನ್ನು ಖಾಸಗೀಯವರ ಕೈಗೆ ಒಪ್ಪಿಸುತ್ತಿದ್ದಾರೆ ಮೋದಿ. ಅಂಬಾನಿ, ಅದಾನಿಗೆ ಅನುಕೂಲ ಮಾಡಿ ಕೊಡುವ ಯೋಜನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎಸ್​ಬಿಐ ನೇತೃತ್ವದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್​ ಕರೆ ನೀಡಿರುವ ಬ್ಯಾಂಕ್​ ಮುಷ್ಕರಕ್ಕೆ ರಾಷ್ಟ್ರವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಷ್ಕರದ ಎರಡನೇ ದಿನವಾದ ಇಂದು ಕೂಡ ಅನೇಕ ಬ್ಯಾಂಕುಗಳು ವಹಿವಾಟು ನಡೆಸಲಿಲ್ಲ.

ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್​ ಸಂಘಟನೆಗಳು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ದೆಹಲಿಯಲ್ಲಿ ರೈತರು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯಂತೇ ನಾವು ಕೂಡ ಪ್ರತಿಭಟನೆಗೆ ಕೂರಬೇಕಾಗುತ್ತದೆ ಎಂದು ಎಚ್ಚರಿಸಿವೆ.

ಸೋಮವಾರದ ಮುಷ್ಕರದಲ್ಲಿ ಸುಮಾರು 10 ಲಕ್ಷ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕವಲಯದ ಬ್ಯಾಂಕುಗಳನ್ನು ಉಳಿಸಿ, ಸಾಮಾಜಿಕ ಬ್ಯಾಂಕಿಗ್ ವ್ಯವಸ್ಥೆ ಉಳಿಸಿ, ನಾಗರಿಕರ ಉಳಿತಾಯ ಠೇವಣಿ ರಕ್ಷಿಸಿ ಎಂದು ಸ್ಲೋಗನ್​ಗಳನ್ನು ಮುಷ್ಕರನಿರತರು ಪ್ರದರ್ಶಿಸಿದ್ದಾರೆ. ಪ್ರಮುಖ ಬ್ಯಾಂಕುಗಳ ಈ ಎರಡು ದಿನದ ಮುಷ್ಕರದಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರಕ್ಕೆ ಆದಾಯದ ಹರಿವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್​ನಲ್ಲಿ ಖಾಸಗೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ದಿಸೆಯಲ್ಲಿ ಮತ್ತಷ್ಟು ಬ್ಯಾಂಕುಗಳನ್ನು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಮಾತನ್ನಾಡಿದ್ದಾರೆ. ಇದನ್ನು ಖಂಡಿಸಿ ಬ್ಯಾಂಕುಗಳು ದೇಶ ವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net