

ಮೈಸೂರು: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಈ ಬಾರಿಯ ಬಜೆಟ್ ಚೇತರಿಕೆ ನೀಡಬಹುದೆಂದು ದೇಶದ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಎಲ್ಲರ ನಿರೀಕ್ಷೆಗಳನ್ನು ಕೇಂದ್ರ ಸರ್ಕಾರ ಹುಸಿಗೊಳಿಸಿದೆ. ಈಗಾಗಲೇ ಸಾಲಗಾರ ದೇಶವಾಗಿರುವ ಭಾರತವನ್ನು ದಿವಾಳಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 30 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಕಳೆದ ಬಾರಿ 26 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಕಳೆದ ಬಾರಿ ಬಜೆಟ್ನಲ್ಲಿ ಘೊಷಿಸಿದ ಮೊತ್ತದ ಪೈಕಿ 2 ಲಕ್ಷ ಕೋಟಿ ರೂ. ಕಡಿಮೆ ಖರ್ಚು ಮಾಡಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡಲು ವಿಫಲವಾಗಿದ್ದೇ ಇದಕ್ಕೆ ಕಾರಣ. ನೇರ ತೆರಿಗೆ ಸಂಗ್ರಹ ಆಗದೆ ದೇಶ ಆರ್ಥಿಕ ಸಂಕಷ್ಟ ಎದುರಿಸಿದ್ದು, ಇದರ ಪರಿಣಾಮವನ್ನು ರಾಜ್ಯ ಕೂಡ ಎದುರಿಸುತ್ತಿದೆ ಎಂದರು.
ರೈತರ ಪಾಲಿಗೆ ಬಜೆಟ್ ನಿರಾಶಾದಾಯಕವಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡಲಾಗುವುದೆಂದು ಸರ್ಕಾರ ಘೊಷಿಸಿತ್ತು. ಆದರೆ, ಆದಾಯ ದುಪ್ಪಟ್ಟು ಆಗಲು ಕೃಷಿ ಬೆಳವಣಿಗೆ ಶೇ.10ಕ್ಕಿಂತ ಹೆಚ್ಚಾಗಬೇಕು. ಈಗಿನ ಬೆಳವಣಿಗೆ ಶೇ.2.5ರಷ್ಟು ಮಾತ್ರ ಇದೆ. ದೇಶದ ಆರ್ಥಿಕತೆ ಸುಧಾರಣೆಯಾಗಲು ಹೂಡಿಕೆ ಪ್ರಮಾಣ ಹಾಗೂ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಬೇಕು. ರಫ್ತು ಪ್ರಮಾಣ ಹೆಚ್ಚಾಗಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಹತ್ತಾರು ದೇಶ ಸುತ್ತಾಡಿ ಬಂದರೂ ದೇಶದಲ್ಲಿ ಹೂಡಿಕೆ ಮಾಡುವಂತ ವಾತಾವರಣವನ್ನು ಅವರು ಸೃಷ್ಟಿ ಮಾಡಲೇ ಇಲ್ಲ. ಆರ್ಥಿಕ ಚೇತರಿಕೆಗೆ ತಜ್ಞರ ಸಲಹೆ ಪಡೆಯುವ ಸೌಜನ್ಯ ಕೂಡ ಅವರಿಗೆ ಇಲ್ಲ. ಆರ್ಥಿಕ ತಜ್ಞ ಮನಮೋಹನ್ಸಿಂಗ್ ಅವರ ಸಲಹೆಯನ್ನು ಕೂಡ ಅವರು ಸ್ವೀಕಾರ ಮಾಡಲಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಎಲ್ಐಸಿ ಷೇರನ್ನು ಮಾರಾಟ ಮಾಡಲು ಹೊರಟಿದ್ದು, ಇದು ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಆರ್ಥಿಕ ಚೇತರಿಗೆ ಬಜೆಟ್ನಲ್ಲಿ ಪೂರಕ ಅಂಶಗಳನ್ನು ಪ್ರಸ್ತಾಪಿಸದೆ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಅಧೋಗತಿಗೆ ತಲುಪುವ ಸಾಧ್ಯತೆ ಇದೆ. ಇದನ್ನು ಮುಚ್ಚಿಡಲು ಎನ್ಪಿಆರ್, ಸಿಎಎ, ಎನ್ಆರ್ಸಿ ಜಾರಿಗೊಳಿಸಲಾಗುತ್ತಿದೆ ಎಂದು ಟೀಕಿಸಿದರು.
ಬಜೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರ ಸರ್ಕಾರ ಟಿಂಕರಿಂಗ್ ಕೆಲಸವನ್ನಷ್ಟೇ ಮಾಡಿದೆ. ಕಳೆದ ಬಾರಿ ಬೆಂಗಳೂರಿಗೆ ಸಬ್ಅರ್ಬನ್ ರೈಲು ಘೊಷಣೆ ಮಾಡಲಾಗಿತ್ತು. ಒಂದು ಕಿ.ಮೀ. ಹಳಿ ನಿರ್ಮಾಣ ಕೂಡ ಆಗಲಿಲ್ಲ. ಈ ಬಾರಿಯೂ ಅದೇ ಘೊಷಣೆ ಮಾಡಿದ್ದಾರೆ. ಬೆಂಗಳೂರಿನ ಜನರು ಈ ಘೊಷಣೆ ಕೇಳಿ ಖುಷಿ ಪಡಬೇಕಷ್ಟೆ ಎಂದು ವ್ಯಂಗ್ಯವಾಡಿದರು.
ಅತ್ಯಂತ ನಿರಾಶಾದಾಯಕ ಬಜೆಟ್. ದೇಶದ ಪ್ರಗತಿಯ ನಿರೀಕ್ಷೆ ಈ ಬಜೆಟ್ನಿಂದ ಸಾಧ್ಯವಿಲ್ಲ. ಹಿಂದಿನ 5 ವರ್ಷದ ಘೋಷಣೆಗಳು ಏನಾಗಿವೆ ಎಂಬ ಮಾಹಿತಿಯನ್ನೇ ಕೊಟ್ಟಿಲ್ಲ. ಶಿಕ್ಷಣ ಇಲಾಖೆಗೆ ಕಳೆದ ಬಜೆಟ್ನಲ್ಲಿ 1.30 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಅದು 98 ಸಾವಿರ ಕೋಟಿಗೆ ಇಳಿದಿದೆ. ಜಲ ಜೀವನ ಮಿಷನ್ಗೆ ಇಟ್ಟಿರುವ ಹಣ ಜನಕ್ಕೆ ಉಪಯೋಗವಾಗುವುದಿಲ್ಲ. ಕಿಸಾನ್ ಉಡಾನ್ ಮೂಲಕ ರೈತರನ್ನು ಆಕಾಶದಲ್ಲಿ ಓಡಾಡಿಸುತ್ತಾರೆಯೆ? ಉದ್ಯೋಗ ಸೃಷ್ಟಿ ಯಾವ ರೀತಿ ಎಂಬುದಿಲ್ಲ. ದೇಶಕ್ಕೆ ಮಾರಕ ಮತ್ತು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ