

ಶ್ರೀರಂಗಪಟ್ಟಣ: ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಅಧಿದೇವತೆಯ ದೇಗುಲದಲ್ಲಿ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಾಲಯದ ವೈಧಿಕರು ವಿವಿಧ ಮುಖ ಬೆಲೆಯ ನೋಟುಗಳಿಂದ ವರ್ಣರಂಜಿತ ಅಲಂಕರಿಸಿ ಪೂಜಿಸಿದರು.
ಮುಂಜಾನೆಯೇ ಬ್ರಾಹ್ಮಿ ಮೂಹರ್ತದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಲಕ್ಷ್ಮೀಶ ಶರ್ಮ ಅವರಿಂದ ಫಲ-ಪಂಚಾಮೃತ ಅಭಿಷೇಕ ಹಾಗೂ ಮಹಾನ್ಯಾಸಪೂರಕ ಅಭಿಷೇಕ, ದುರ್ಗಸಪ್ತಶತಿ ಪಾರಾಯಣ, ಸಹಸ್ರನಾಮ ಅಷ್ಟೋತ್ತರ ನೆರವೇರಿಸಿ ಮಹಾಮಂಗಳಾರತಿ ಅರ್ಪಿಸಲಾಯಿತು. ಬಳಿಕ ದೇವಾಲಯದ ಗರ್ಭಗುಡಿ ಸೇರಿದಂತೆ ಪ್ರಾಂಗಣದ ಆವರಣವನ್ನು ದೇವಿಯ ಭಕ್ತರಿಂದ ಪಡೆಯಲಾಗಿದ್ದ 500, 200, 100, 50, 20, 10 ರೂ. ಮುಖಬೆಲೆಯ ಒಟ್ಟು 4.5 ಲಕ್ಷ ರೂ. ನೋಟುಗಳಲ್ಲಿ ಸಂದೇಶ್ ಕಲಾವಿದ ನೇತೃತ್ವದಲ್ಲಿ ವರ್ಣರಂಜಿತವಾಗಿ ವೈಭವಯುಕ್ತವಾಗಿ ಅಲಂಕರಿಸಲಾಗಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಶಕ್ತಿ ದೇವಿಯ ದರ್ಶನ ನೋಡುಗರ ಆಕರ್ಷಿಸುವಂತಿದ್ದು, ದೇವಿಯನ್ನು ಕಣ್ತುಂಬಿಕೊಳ್ಳಲು ಶ್ರೀರಂಗಪಟ್ಟಣ-ಗಂಜಾಂನ ಪುರಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಮಾತ್ರವಲ್ಲದೆ ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶಕ್ತಿ ದೇವಿಯ ದರ್ಶನದೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿದರು. ಸರ್ವಾಲಾಂಕೃತಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಭಕ್ತರು ಮತ್ತು ಸಾರ್ವಜನಿಕರಿಗೆ ಭಾನುವಾರದವರೆಗೆ ಇನ್ನೂ ಎರಡು ದಿನಗಳವರೆಗೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದೆ.