

ಬೆಂಗಳೂರು: ಭಾರತದ ಪ್ರತಿಷ್ಠಿತ ಕೆನರಾ ಬ್ಯಾಂಕ್ಗೆ 2022ನೇ ಸಾಲಿನ 'ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿ' ಒಲಿದಿದೆ.
ಲಂಡನ್ನಲ್ಲಿ ನ.29ರಿಂದ ಡಿ.1ರ ವರೆಗೆ ಫೈನಾನ್ಷಿಯಲ್ ಟೈಮ್ಸ್ ಆಯೋಜಿಸಿದ್ದ ಗ್ಲೋಬಲ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಅವಾರ್ಡ್ಗೆ 'ಭಾರತದ ಕೆನರಾ ಬ್ಯಾಂಕ್' ಆಯ್ಕೆಯಾಯಿತು. 2022ರ ಡಿಸೆಂಬರ್ 1ರಂದು ಲಂಡನ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು. ಕೆನರಾ ಬ್ಯಾಂಕ್ನ ಎಂಡಿ, ಸಿಇಒ ಎಲ್.ವಿ. ಪ್ರಭಾಕರ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
12 ತಿಂಗಳಲ್ಲಿ ಆಯಾ ಭೌಗೋಳಿಕತೆಯಲ್ಲಿ ಉತ್ಪನ್ನ ಮತ್ತು ಸೇವೆಯಲ್ಲಿ ಬ್ಯಾಂಕ್ಗಳ ಸಾಮರ್ಥ್ಯವನ್ನ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆದಾಯ, ತಂತ್ರಗಾರಿಕೆ, ನಾವೀನ್ಯತೆ, ತಂತ್ರಜ್ಞಾನ, ಉತ್ಪನ್ನ ಮತ್ತು ಸೇವೆ... ಈ ಎಲ್ಲ ಅಂಶದಲ್ಲೂ ಕೆನರಾ ಬ್ಯಾಂಕ್ ಅಭೂತಪೂರ್ವ ಸಾಧನೆ ಮಾಡಿದ್ದು, ಪ್ರಶಸ್ತಿ ಒಲಿದಿದೆ. 2022ನೇ ಸಾಲಿನಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಸಾರಿದೆ.
ದಿ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಆಸ್ಕರ್ ಪ್ರಶಸ್ತಿಗಳಿದ್ದಂತೆ. ಕೆನರಾ ಬ್ಯಾಂಕ್ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಈ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ತನ್ನ ಎಲ್ಲ ಗ್ರಾಹಕರು, ಹೂಡಿಕೆದಾರರು, ಸಿಬ್ಬಂದಿ ಮತ್ತು ಷೇರುದಾರರಿಗೆ ಅರ್ಪಿಸುವುದಾಗಿ ತಿಳಿಸಿದೆ.
'ಬ್ಯಾಂಕರ್ಸ್' ನಿಯತಕಾಲಿಕೆಯು ವಿಶ್ವದ 180ಕ್ಕೂ ಹೆಚ್ಚು ದೇಶಗಳ ಪ್ರಮುಖ ಬ್ಯಾಂಕಿಂಗ್ ಮತ್ತು ಹಣಕಾಸು ಸಂಪನ್ಮೂಲವಾಗಿದೆ. ಜಗತ್ತಿನಾದ್ಯಂತ ಎಲ್ಲ ದೇಶಗಳ ಬ್ಯಾಂಕರ್ಸ್ ನಿಯತಕಾಲಿಕವು ಫೈನಾನ್ಷಿಯಲ್ ಟೈಮ್ಸ್ (FT) ಗ್ರೂಪ್ಗೆ ಸೇರಿದೆ. ಬ್ರಿಟಿಷ್ ಮೂಲದ ಜಾಗತಿಕ ಹಣಕಾಸು ದಿನಪತ್ರಿಕೆಯಾದ ಫೈನಾನ್ಷಿಯಲ್ ಟೈಮ್ಸ್ 1888ರಲ್ಲಿ ಆರಂಭವಾಯಿತು. ಇದು ಹಣಕಾಸು ಉದ್ಯಮದ ನಂಬರ್ 1 ದಿನಪತ್ರಿಕೆ.