

ಬಂಕಾಪುರ: ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ. ಸುಂಕದಕೇರಿಯ ಸುಮಾ ಕಲ್ಮೇಶ ಹೊಳಿ (25) ಮೃತಪಟ್ಟ ಗರ್ಭಿಣಿ. ಶನಿವಾರ ಮಧ್ಯಾಹ್ನ ತೆಲೆ ಸುತ್ತು ಬರುತ್ತಿದೆ ಎಂದು ಅಜ್ಜಿ ಮತ್ತು ಸಹೋದರನೊಂದಿಗೆ ಪಟ್ಟಣದ ಬರ್ಚಿವಾಲೆ ಪಾಲಿ ಕ್ಲಿನಿಕ್ಗೆ ತೆರಳ್ದಿರು. ಗರ್ಭಿಣಿಯನ್ನು ಪರೀಕ್ಷೆ ಮಾಡಿದ ಖಾಸಗಿ ವೈದ್ಯ ದಂಪತಿಯಾದ ಮಹಮ್ಮದಸಲೀಮ ಮತ್ತು ನುಸ್ರುತ್ ಬರ್ಚಿವಾಲೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಗರ್ಭಿಣಿ ಮೃತಪಟ್ಟಿದ್ದಾಳೆ. ಮನೆಯಿಂದ ಆರಾಮವಾಗಿ ಬಂದಿದ್ದ ನನ್ನ ಮೊಮ್ಮಗಳು ವೈದ್ಯರು ಬಾಟಲಿ ಹಚ್ಚಿ ಇಂಜೆಕ್ಷನ್ ಮಾಡಿದ ಸ್ಪಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾಳೆ. ನನ್ನ ಮೊಮ್ಮಗಳು ತುಂಬು ಗರ್ಭಿಣಿ ಆರಾಮ ಇದ್ದಳು. ಅವಳ ಆರೋಗ್ಯದಲ್ಲಿ ಏರು-ಪೇರಾಗಿದ್ದರೆ ಹೆಚ್ಚಿನ ಚಿಕಿತ್ಸೆಗೆ ನಮ್ಮನ್ನು ಮುಂದೆ ಕಳುಹಿಸಬೇಕಿತ್ತು. ಆದರೆ, ಇಲ್ಲಿನ ವೈದ್ಯರು ತಾವೇ ಚಿಕಿತ್ಸೆ ನೀಡಿ ನನ್ನ ಮೊಮ್ಮಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತ ಗರ್ಭಿಣಿಯ ಅಜ್ಜಿ ಆರೋಪಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ನಿಂಗರಾಜ ಕೆ.ವೈ. ಮೃತರ ಸಂಬಂಧಿಕರನ್ನು ಸಮಾಧಾನಪಡಿಸಿ, ಮುಂದಿನ ಕ್ರಮ ಜರುಗಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಸತೀಶ ಪರಿಶೀಲನೆ ನಡೆಸಿ, ಘಟನೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗರ್ಭಿಣಿ ಸಾವಿನ ನಂತರ ವೈದ್ಯ ದಂಪತಿ ಆಸ್ಪತ್ರೆ ಬಿಟ್ಟು ಓಡಿ ಹೋಗಿದ್ದಾರೆ. ವೈದ್ಯ ದಂಪತಿಯನ್ನು ಬಂಧಿಸುವಂತೆ ಮೃತಳ ಸಂಬಂಧಿಕರು ಆಗ್ರಹಿಸಿದ್ದಾರೆ.
ಮನ ಕಲುಕಿದ ಅಜ್ಜಿ ಗೋಳಾಟ: ತಾಯಿ ಇಲ್ಲದ ಮೊಮ್ಮಗಳನ್ನು ಮಗಳಗಿಂತಲೂ ಹೆಚ್ಚು ಜೋಪಾನ ಮಾಡಿದ್ದೆ. ಎರಡು ಬಾರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದ್ದೆ. ತಾಯಿ ಮತ್ತು ಮಗು ಆರಾಮವಾಗಿದ್ದಾರೆ, ಸಹಜ ಹೆರಿಗೆ ಆಗುತ್ತದೆ ಎಂದಿದ್ದರು. ಸುಮಾ ಮಧ್ಯಾಹ್ನ ತಲೆ ಸುತ್ತುತ್ತಿದೆ ಎಂದಳು. ಆಗ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಸಜ್ಜಾದೇವು. ಯಾರೋ ಒಬ್ಬರು ಇಂದು ಡಾಕ್ಟರ್ ಸ್ಟ್ರೈಕ್ ಮಾಡ್ಯಾರ ಅಂದಾಗ ವಿಧಿ ನಮ್ಮನ್ನು ಈ ಆಸ್ಪತ್ರೆಗೆ ಕರೆದುಕೊಂಡು ಬಂತು. ಅವಳ ಗಂಡ ಬಂದು ನನ್ನ ಹೆಂಡತಿ ಎಲ್ಲಿ ಅಂತ ಕೇಳಿದರೇ ನಾನೇನು ಹೇಳಲಿ ಎಂದು ಅಜ್ಜಿ ಗೋಳಾಡುತ್ತಿದ್ದ ದೃಶ್ಯ ಎಲ್ಲರ ಮನ ಕುಲುಕಿತು.