ಬ್ಯಾಂಕ್ ಸಾಲವಿನ್ನು ಸಲೀಸು! ರಾಜ್ಯದಲ್ಲೂ ಬಳಕೆ ಪ್ರಸ್ತಾವನೆ, ಇ-ಆಡಳಿತ ಇಲಾಖೆ ಪರಿಶೀಲನೆ

ವಿಜಯವಾಣಿ (4)
Published on

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಲೀಸಾಗಿ ಸಾಲ ಪಡೆಯಲು ಕೇಂದ್ರ ಸರ್ಕಾರ ವಿಶೇಷ ವ್ಯವಸ್ಥೆ ರೂಪಿಸಿದೆ. ಈ ವ್ಯವಸ್ಥೆಯನ್ನು ಇದೀಗ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕೇಂದ್ರ ಸರ್ಕಾರದ ಅಧೀನದ ನ್ಯಾಷನಲ್ ಇನ್​ಫಾರೆ್ಮಟಿಕ್ ಸೆಂಟರ್ ಅರ್ಥಾತ್ ಎನ್​ಐಸಿ ಡಿಜಿಟಲ್ ವೇದಿಕೆ ಸೃಷ್ಟಿಸಿದೆ, ಅದನ್ನು ಬಳಸಿಕೊಂಡಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸಾಲ ಪಡೆಯಬೇಕಾದಾಗ ಬ್ಯಾಂಕುಗಳನ್ನು ನೇರವಾಗಿ ಸಂರ್ಪಸಬಹುದಾಗಿದೆ. ರಾಜ್ಯ ಬ್ಯಾಂಕರುಗಳ ಸಮಿತಿ ಕೋರಿಕೆಯಂತೆ ಅಭಿವೃದ್ಧಿ ಆಯುಕ್ತರು ಇ- ಆಡಳಿತ ಇಲಾಖೆಗೆ ಈ ವ್ಯವಸ್ಥೆ ಅನುಷ್ಠಾನದ ಕುರಿತು ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದಾರೆ.

ನೇರ ಅರ್ಜಿಗೆ ಅವಕಾಶ

ಕೆಲವು ಪ್ರಕರಣಗಳಲ್ಲಿ ಸರ್ಕಾರವೇ ಭಾಗಿದಾರನ ರೀತಿ ಫಲಾನುಭವಿ ಬದಲು ಸಾಲಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ಈ ವೇದಿಕೆ ಮೂಲಕ ನೇರ ಅರ್ಜಿ ರವಾನಿಸುವ ಅವಕಾಶವೂ ಸಿಗಲಿದೆ.

ಉಪಯೋಗವೇನು?

ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸುವುದರಿಂದ ಕಾಗದ ಪತ್ರದ ಕೆಲಸ ಕಡಿಮೆಯಾಗಲಿದೆ. ಸರ್ಕಾರದ ಬಳಿಯೇ ಕೆಲವು ದಾಖಲೆ ಇರುವುದರಿಂದ ಅದನ್ನು ಡಿಜಿಟಲ್ ರೂಪದಲ್ಲಿ ಹೊಂದಿಸಿ ಅರ್ಜಿ ಕಳಿಸಬಹುದು. ಕೇಂದ್ರೀಕೃತ ಡೇಟಾಬೇಸ್ ಮತ್ತು ರಿಯಲ್ ಟೈಮ್ ಅಪ್​ಡೇಟ್ ಕಾರಣ ಅರ್ಜಿ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದ್ದು, ಕಾರ್ಯಕ್ಷಮತೆ ಹೆಚ್ಚಲಿದೆ. ಬಹು ಮುಖ್ಯವಾಗಿ ಪಾರದರ್ಶಕತೆ ಹೆಚ್ಚಾಗಲಿದೆ. ಆನ್​ಲೈನ್ ಟ್ರ್ಯಾಕ್​ ಸುಲಭವಾಗುವ ಕಾರಣ ಅರ್ಜಿ ಪ್ರಕ್ರಿಯೆ ಹಂತವನ್ನು ಸರ್ಕಾರ ಮತ್ತು ಫಲಾನುಭವಿ ಅರಿಯಬಹುದು. ಬ್ಯಾಂಕುಗಳು ನೆಪ ಹೇಳುವುದಕ್ಕೂ ಅವಕಾಶ ಇಲ್ಲವಾಗುತ್ತದೆ. ಸಾಲದ ಪ್ರಕ್ರಿಯೆಯ ಸಂಪೂರ್ಣ ಸಮಯ ಕಡಿತವಾಗುತ್ತದೆ.

ರಿಯಲ್ ಟೈಮ್ ಅಪ್​ಡೇಟ್ ಆಗುವ ಕಾರಣದಿಂದ ಅರ್ಜಿ ಬಾಕಿ ಇಡುವುದಕ್ಕೆ ಸಾಧ್ಯವಾಗುವುದಿಲ್ಲ. ಸಾಲ ಕೊಡಲು ಒಪ್ಪಿತವೇ ಅಥವಾ ಅರ್ಜಿ ತಿರಸ್ಕರಿಸಲಾಗಿದೆಯೇ ಎಂಬುದು ಖಚಿತವಾಗುತ್ತದೆ. ಸರ್ಕಾರ ಹಾಗೂ ಬ್ಯಾಂಕ್​ಗಳ ಹೊಣೆಗಾರಿಕೆ ನಿಗದಿ ಮಾಡಿದಂತಾಗುತ್ತದೆ. ಅರ್ಜಿ ವಿಲೇವಾರಿ ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಹೊಣೆಗಾರಿಕೆ ಎರಡೂ ಕಡೆಯವರಿಗೆ ಇರಲಿದೆ.

ಹೇಗಿರಲಿದೆ ವ್ಯವಸ್ಥೆ?

  • ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಅನ್ವಯ
  • ತಮ್ಮ ಪಾಲಿನ ಹಣ ತುಂಬುವುದು ಅನಿವಾರ್ಯ
  • ಬ್ಯಾಂಕ್, ಹಣಕಾಸು ಸಂಸ್ಥೆ ಸಾಲ ಬಯಸುತ್ತಾರೆ
  • ಸಾಲ ಅಗತ್ಯವಿದ್ದರೆ ಎನ್​ಐಸಿ ಪೋರ್ಟಲ್ ನೆರವು
  • ಅರ್ಜಿ ತುಂಬಿದ ಬಳಿಕ ಬ್ಯಾಂಕ್ ಖಾತೆ ಕ್ಲಿಕ್ಕಿಸಬೇಕು
  • ತಕ್ಷಣ ಅರ್ಜಿ ಬ್ಯಾಂಕ್ ಶಾಖೆಗೆ ರವಾನೆ ಆಗುತ್ತದೆ
  • ಅರ್ಜಿ ಪರಿಶೀಲನೆ ಬಳಿಕ ಸಾಲ ಸೌಲಭ್ಯ ನಿರ್ಧಾರ
  • ಇದರಿಂದ ಬ್ಯಾಂಕ್ ಶಾಖೆ ಅಲೆದಾಟ ತಪು್ಪತ್ತದೆ

ಪ್ರಮುಖಾಂಶಗಳು

1. ಸದ್ಯ ಫಲಾನುಭವಿಗಳು ಸರ್ಕಾರದ ಯೋಜನೆ ಫಲಾನುಭವಿಯಾದ ಪ್ರಮಾಣ ಪತ್ರ ಹಿಡಿದು ಸಾಲಕ್ಕಾಗಿ ಬ್ಯಾಂಕ್​ಗೆ ಅಲೆಯಬೇಕಾಗಿದೆ

2. ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುವುದಿಲ್ಲ. ಹತ್ತಾರು ಬಾರಿ ಅಲೆದಾಡಿಸುತ್ತವೆ. ದಾಖಲೆ ಹಾಜರುಪಡಿಸಲು ಒತ್ತಾಯಿಸುತ್ತವೆ

3. ಯಾವುದಾದರೊಂದು ಕುಂಟು ನೆಪ ಹೇಳಿ ಸಾಲ ನಿರಾಕರಿಸುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಫಲಾನುಭವಿಗೆ ಅನ್ಯಮಾರ್ಗ ಹುಡುಕುವುದು ಅನಿವಾರ್ಯ

4. ನೇರ ಅರ್ಜಿ ಸಲ್ಲಿಕೆ ವ್ಯವಸ್ಥೆಯಿಂದ ಸಾಲ ನೀಡಿಕೆಗೆ ಕೆಲವು ಷರತ್ತು ಸಡಿಲಿಕೆಗೂ ಬ್ಯಾಂಕುಗಳಿಗೆ ಅನುಕೂಲವಾಗಲಿದೆ.

5. ಸರ್ಕಾರಿ ಯೋಜನೆಗಳ ಸಾಲ ನೀಡಿಕೆಯ ಗುರಿ ಮುಟ್ಟಲು ಹೊಸ ವ್ಯವಸ್ಥೆಯಲ್ಲಿ ಬ್ಯಾಂಕುಗಳಿಗೆ ಉಪಯೋಗವಾಗಲಿದೆ

ಸಾಲದ ಸಂದರ್ಭ

ಸರ್ಕಾರ ಸ್ವಂತ ಉದ್ಯಮ ಆರಂಭಿಸಲು ವಾಹನ ನೀಡುವ ಯೋಜನೆ ಅನುಷ್ಠಾನ ಮಾಡುತ್ತದೆ, ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಿದ್ದು, ಉಳಿದ ಮೊತ್ತಕ್ಕೆ ಫಲಾನುಭವಿ ಸಾಲ ಮಾಡಬೇಕಾಗುತ್ತದೆ. ಅದೇ ರೀತಿ ವಸತಿ ಯೋಜನೆಯಲ್ಲಿ ಫಲಾನುಭವಿ ತನ್ನ ಪಾಲಿನ ಹಣ ತುಂಬಲು ಬ್ಯಾಂಕ್​ನಲ್ಲಿ ಸಾಲ ಮಾಡಬೇಕಾಗುತ್ತದೆ. ಇನ್ನು ಕೃಷಿ ಯೋಜನೆಗಳಲ್ಲಿ, ಕೈಗಾರಿಕೆ ಇಲಾಖೆ ಅಥವಾ ಐಟಿಬಿಟಿ ಇಲಾಖೆಯ ಸಬ್ಸಿಡಿ ಯೋಜನೆಗಳಲ್ಲಿ ಫಲಾನುಭವಿ ಬ್ಯಾಂಕುಗಳಲ್ಲಿ ಸಾಲ ಮಾಡುವ ಸಂದರ್ಭ ಇರುತ್ತದೆ. ಸರ್ಕಾರದ ಸಬ್ಸಿಡಿ ಪಡೆಯಲು ತನ್ನ ಪಾಲಿನ ಮೊತ್ತ ತುಂಬಲು ಸಾಲ ಪಡೆಯುವುದು ಸಾಮಾನ್ಯ. ಪ್ರತಿವರ್ಷ ಈ ರೀತಿ ಸಾಲ ಪಡೆಯುವವರ ಸಂಖ್ಯೆ ಲಕ್ಷಗಳಲ್ಲಿ ಇರಲಿದೆ.

ಅಭಿಪ್ರಾಯ ನಿರೀಕ್ಷೆ

ಪ್ರಸ್ತಾವನೆಯನ್ನು ವಿವಿಧ ಇಲಾಖೆಗಳ ಜತೆ ಸಮಾಲೋಚಿಸಿದ ಬಳಿಕ ಎನ್​ಐಸಿ ವೇದಿಕೆ ಬಳಸಿಕೊಳ್ಳುವ ಬಗ್ಗೆ ಇ-ಗೌರ್ನೆನ್ಸ್ ಇಲಾಖೆ ತನ್ನ ಅಭಿಪ್ರಾಯ ತಿಳಿಸಬೇಕಾಗಿದೆ. ಬಳಿಕ ಸರ್ಕಾರ ಹೊಸ ವ್ಯವಸ್ಥೆಗೆ ಮುದ್ರೆ ಒತ್ತಲಿದೆ ಎಂದು ಹಿರಿಯ ಅಧಿಕಾರಿ ವಿಜಯವಾಣಿಗೆ ವಿವರಿಸಿದರು.

ಎಲ್ಲೆಲ್ಲಿ ಬಳಕೆಯಲ್ಲಿದೆ?

ಬಿಹಾರ, ಮಧ್ಯ ಪ್ರದೇಶ, ಗುಜರಾತ್​ನಲ್ಲಿ ಪ್ರಸ್ತುತ ಎನ್​ಐಸಿಯ ಈ ವೇದಿಕೆ ಬಳಸಿಕೊಂಡು ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಕರ್ನಾಟಕದಲ್ಲೇಕೆ ಈ ವ್ಯವಸ್ಥೆ ಜಾರಿಗೆ ತರಬಾರ ದೆಂದು ಬ್ಯಾಂಕುಗಳು ಸರ್ಕಾರಕ್ಕೆ ಕೋರಿಕೆ ಇಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net