

ಬೆಂಗಳೂರು: ಬ್ಯಾಂಕ್ ನೌಕರನೊಬ್ಬ ಗ್ರಾಹಕರ ಖಾತೆಗೆ ಕನ್ನ ಹಾಕಿ 22 ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ!
ಜೀವನ್ಬಿಮಾನಗರದಲ್ಲಿ ವಾಸವಿದ್ದ ಶ್ರೀನಿವಾಸ್ ಐಡಿಎಫ್ಸಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ. ಆಂಧ್ರಪ್ರದೇಶ ಮೂಲದ ಈತ ಕೆಲ ದಿನಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೊಂದು ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಕೆಲಸದ ವೇಳೆ ಬ್ಯಾಂಕ್ ಗ್ರಾಹಕರ ಮಾಹಿತಿ ತಿಳಿದುಕೊಂಡಿದ್ದ. ಗ್ರಾಹಕರ ಖಾತೆಯಲ್ಲಿದ್ದ 22 ಲಕ್ಷ ರೂ.ಗಳನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡು ತನಗೇನೂ ಗೊತ್ತಿಲ್ಲ ಎಂಬಂತೆ ಇದ್ದ.
ತನ್ನ ಗ್ರಾಹಕರೊಬ್ಬರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಐಡಿಎಫ್ಸಿ ಬ್ಯಾಂಕ್ ಮ್ಯಾನೇಜರ್ ರಾಜೇಶ್ ನಂದಾ ದೂರು ನೀಡಿದ್ದರು. ಸಿಐಡಿ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಾಗ ಗೊತ್ತಾಯ್ತು ಗ್ರಾಹಕರ ಖಾತೆಗೆ ಕನ್ನ ಹಾಕಿದ್ದ ಖದೀಮ ಆ ಬ್ಯಾಂಕ್ನ ಮಾಜಿ ನೌಕರ ಶ್ರೀನಿವಾಸ್ ಎಂದು.
ಬ್ಯಾಂಕ್ ಗ್ರಾಹಕರ ಮೊಬೈಲ್ ನಂಬರ್ ನಿಷ್ಕ್ರಿಯಗೊಳಿಸಿ ತನ್ನ ಮೊಬೈಲ್ ನಂಬರ್ಗೆ ಖಾತೆ ಲಿಂಕ್ ಮಾಡಿಸಿದ್ದ ಶ್ರೀನಿವಾಸ್, ಆನ್ಲೈನ್ ಬ್ಯಾಂಕಿಂಗ್ ಮೂಲಕ ಒಟಿಪಿ ಪಡೆದು ಅವರ ಖಾತೆಯಲ್ಲಿದ್ದ ಹಣವನ್ನು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿರುವ ಎನ್. ಶ್ರೀಕಲ್ಪನಾ ಎಂಬುವರ ಖಾತೆಗೆ ವರ್ಗಾಯಿಸಿದ್ದ. ಹಣ ವರ್ಗಾವಣೆ ಆಗಿರುವ ಕುರಿತು ಆ ಗ್ರಾಹಕ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಆರೋಪಿ ಶ್ರೀನಿವಾಸ್ (39)ನನ್ನು ಪೊಲೀಸರು ಬಂಧಿಸಿದ್ದಾರೆ.