ಬ್ಯಾಂಕ್ ಖಾತೆಗಳ ಸಕ್ರಿಯ ಅಭಿಯಾನ | September deadline

Bankers meeting
Published on

ಬೆಂಗಳೂರು: ಪ್ರಧಾನಮಂತ್ರಿ ಜನಧನ್, ಜೀವನ್‌ಜ್ಯೋತಿ, ಅಟಲ್ ಪೆನ್ಷನ್ ಮುಂತಾದ ಯೋಜನೆಗಳಡಿ ತೆರೆದ ಬ್ಯಾಂಕ್ ಖಾತೆಗಳಲ್ಲಿ ನಿಷ್ಕ್ರಿಯವಾದವುಗಳನ್ನು ಮತ್ತೆ ಸಕ್ರಿಯಗೊಳಿಸುವ ಅಭಿಯಾನ ನಡೆದಿದ್ದು, ಸೆಪ್ಟೆಂಬರ್ ಒಳಗೆ ನಿಗದಿತ ಗುರಿ ಸಾಧಿಸಲು ರಾಜ್ಯದ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಸಲಹೆ ನೀಡಿದರು.

ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಬ್ಯಾಂಕರ್ಸ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಸ್ತಿತ್ವದಲ್ಲಿರುವ ಪಿಎಂಜೆಡಿವೈ, ಪಿಎಂಜೆಜೆಬಿವೈ, ಎಪಿವೈ, ಪಿಎಂಎಸ್‌ಬಿವೈಯಡಿ ಬ್ಯಾಂಕ್ ಖಾತೆಗಳಲ್ಲಿ ನಿಷ್ಕ್ರಿಯವಾದವುಗಳಿಗೆ ಕೆವೈಸಿ ಮರು ಪರಿಶೀಲಿಸಿ ಅಂತಹ ಖಾತೆಗಳನ್ನು ಸಕ್ರಿಯಗೊಳಿಸಬೇಕು.

ಬ್ಯಾಂಕ್ ಖಾತೆಗಳಿಲ್ಲದ ವಯಸ್ಕರಿಗೆ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದು ಹಣಕಾಸು ಸೇರ್ಪಡೆ ಮಾಡಬೇಕು. ಡಿಜಿಟಲ್ ವಂಚನೆ, ಠೇವಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಭಾಗವಾಗಿದೆ ಎಂದರು.

ಸೆಪ್ಟೆಂಬರ್ ಗಡುವು

ಅಭಿಯಾನದಡಿ ನಿಗದಿಪಡಿಸಿದ ಗುರಿಗಳನ್ನು ಸೆಪ್ಟೆಂಬರ್ ಒಳಗೆ ಸಮಿತಿಯ ಎಲ್ಲ ಸದಸ್ಯ ಬ್ಯಾಂಕ್‌ಗಳು ಸಾಧಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಜಿಲ್ಲಾ ಆಡಳಿತಗಳು ಕೈಜೋಡಿಸಬೇಕು ಎಂದು ಉಮಾಮಹಾದೇವನ್ ಸೂಚಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ಮಾತನಾಡಿ ಎಲ್ಲ ಸದಸ್ಯ ಬ್ಯಾಂಕ್‌ಗಳಿಗೆ ಅರ್ಹರು ಒಳಗೊಳ್ಳುವಂತೆ ಸರ್ಕಾರಿ ಖಾತೆಗಳ ಕೆವೈಸಿ ಮರು ಪರಿಶೀಲನೆ ಪೂರ್ಣಗೊಳಿಸಿ, ಖಾತೆಗಳನ್ನು ಸಕ್ರಿಯಗೊಳಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು ಈ ಅಭಿಯಾನದಲ್ಲಿ ತೊಡಗಿಕೊಳ್ಳಬೇಕು ಎಂದು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರಬಾಬು ತಿಳಿಸಿ, ಗ್ರಾಮೀಣ ಬ್ಯಾಂಕ್‌ಗಳು ಆಯೋಜಿಸುವ ಶಿಬಿರಗಳನ್ನು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net