

ಅರಸೀಕೆರೆ: ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರಸಭೆ ಕಚೇರಿ ಆವರಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಹೇಳಿದರು.
ನಗರ ನಿವಾಸಿಗಳು ಕುಡಿಯುವ ನೀರು, ಮನೆ, ನಿವೇಶನ, ಕಟ್ಟಡ ಸೇರಿದಂತೆ ವಿವಿಧ ತೆರಿಗೆಯನ್ನು ಏಪ್ರಿಲ್ ಮಾಹೆಯಲ್ಲಿ ತುಂಬಬೇಕು. ಕರ ಪಾವತಿಗಾಗಿ ಬೇರೆ ಬೇರೆ ಬ್ಯಾಂಕಿಗೆ ತೆರಳುವ ಬದಲು ಒಂದೆಡೆ ಕುಳಿತಲ್ಲೇ ಹಣ ಕಟ್ಟಿಸಿಕೊಳ್ಳುವ ವ್ಯವಸ್ಥೆ ರೂಪಿಸಲಾಗಿದೆ. ಸಮಯ, ಶ್ರಮ ಹಾಗೂ ಅನಗತ್ಯ ಅಲೆದಾಟ ತಪ್ಪಲಿದ್ದು ನಗರ ನಿವಾಸಿಗಳು ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಪೌರಾಯುಕ್ತ ಎಚ್.ಟಿ.ಕೃಷ್ಣ ಮೂರ್ತಿ ಮಾತನಾಡಿ, ಆಸ್ತಿ ದಾಖಲೆ ಕ್ರಮಬದ್ಧಪಡಿಸುವ ಜತೆಗೆ ಯಾವುದೇ ಬಾಕಿ ಉಳಿಸಿಕೊಳ್ಳಬಾರದು. ಸಕಾಲಕ್ಕೆ ತೆರಿಗೆ ಪಾವತಿ ಮಾಡುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಂದಾಯ ಅಧಿಕಾರಿ ಮಂಜುನಾಥ್, ಎಇಇ ರವಿಕುಮಾರ್, ವ್ಯವಸ್ಥಾಪಕಿ ಕಲಾವತಿ, ಸದಸ್ಯ ದರ್ಶನ್, ಮುಖಂಡರಾದ ಅಬ್ದುಲ್ ಜಮೀಲ್, ಸಂತೋಷ್, ರಂಗನಾಥ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹಾಗೂ ನಾಗರಿಕರು ಹಾಜರಿದ್ದರು.