

ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ನೀತಿ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿ ಪ್ರಧಾನಿ ಶೇಖ್ ಹಸೀನಾ ಅಧಿಕಾರ ತ್ಯಜಿಸಿದರೂ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಹೋರಾಟವನ್ನು ಮುಂದುವರಿಸಿದ್ದಾರೆ.ಬಾಂಗ್ಲಾದೇಶದ ಪ್ರಧಾನಿಯ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿ ಲೂಟಿ ಮಾಡಿದ್ದ ಪ್ರತಿಭಟನಾಕಾರರು ಈಗ ಅಲ್ಲಿನ ಸುಪ್ರೀಂಕೋರ್ಟ್, ಕೇಂದ್ರೀಯ ಬ್ಯಾಂಕ್ಗೂ ನುಗ್ಗಿ ದಂಗೆ ಎದ್ದಿದ್ದರಿಂದ ಅವುಗಳ ಮುಖ್ಯಸ್ಥರೂ ಅಧಿಕಾರದಿಂದ ಇಳಿಯುವಂತಾಗಿವೆ. ಪರಿಣಾಮವಾಗಿ, ಬಾಂಗ್ಲಾದೇಶದಲ್ಲಿ ಪದಚ್ಯುತಿ ಪರ್ವ ಮುಂದುವರಿದಿದೆ.
ವಿದ್ಯಾರ್ಥಿಗಳು, ವಕೀಲರನ್ನು ಒಳಗೊಂಡ ಪ್ರತಿಭಟನಾಕಾರ ದೊಡ್ಡ ಗುಂಪು ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಸುಪ್ರೀಂಕೋರ್ಟ್ಗೆ ಘೇರಾವ್ ಹಾಕಿದ್ದು, ನ್ಯಾಯಮೂರ್ತಿಗಳು ಪಿತೂರಿಯಲ್ಲಿ ಪಾಲ್ಗೊಂಡಿ ದ್ದಾರೆ ಎಂದು ಆರೋಪಿಸಿದ್ದಲ್ಲದೆ, ಹೊಣೆಗಾರಿಕೆಗೆ ಆಗ್ರಹಿಸಿ ದಾಂಧಲೆ ನಡೆಸಿದರು. ಅಲ್ಲದೆ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಎಲ್ಲ ನ್ಯಾಯಾಧೀಶರೂ ಮಧ್ಯಾಹ್ನ 1ರ ಒಳಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಸಿಜೆಐ ಒಬೈದುಲ್ ಹಸನ್ ತಮ್ಮ ಸ್ಥಾನಕ್ಕೆ ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡಿದರು. ಅಂತಿಮ ಗಡುವಿಗೂ ಮುನ್ನ ರಾಜೀನಾಮೆ ನೀಡದಿದ್ದರೆ ನ್ಯಾಯಾಧೀಶರ ಕಟ್ಟಡಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಉದ್ವಿಗ್ನತೆ ಹೆಚ್ಚಾಗುವುದನ್ನು ಗಮನಿಸಿದ ಸಿಜೆಐ ಕಟ್ಟಡದಿಂದ ನಿರ್ಗಮಿಸಿದರು.
ರಾಜೀನಾಮೆ ಆಗ್ರಹಕ್ಕೆ ಕಾರಣ?: ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾಗೆ ನಿಷ್ಠರೆನ್ನಲಾದ ಸಿಜೆಐ ಹಸನ್, ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರದ ಜತೆ ಸಮಾಲೋಚನೆ ನಡೆಸದೆ ಪೂರ್ಣ ನ್ಯಾಯಾಲಯ ಸಭೆ ಹಮ್ಮಿಕೊಂಡಿದ್ದೇ ಪ್ರತಿಭಟನಾಕಾರರು ರೊಚ್ಚಿಗೇಳಲು ಕಾರಣ ಎನ್ನಲಾಗಿದೆ. ಇದಕ್ಕೆ ಮಣಿದ ಸಿಜೆಐ ಸಭೆ ಮುಂದೂಡಿದ್ದಲ್ಲದೆ, ಅಧಿಕಾರ ತ್ಯಜಿಸುವುದಾಗಿಯೂ ಘೋಷಿಸಿದರು. ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಬಳಿ ಸೇನೆಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸಬಾರದು, ಶಾಂತಿ ಕಾಪಾಡಬೇಕು ಎಂದು ಸೇನಾಧಿಕಾರಿಗಳು ಕೋರಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ 450ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಗವರ್ನರ್ ರಾಜೀನಾಮೆ: ಬಾಂಗ್ಲಾದೇಶದ ಕೇಂದ್ರೀಯ ಬ್ಯಾಂಕ್ ಗವರ್ನರ್ ಅಬ್ದುರ್ ರೌಫ್ ತಲುಕ್ದರ್ ಕೂಡ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಸ್ಥಾನದ ಮಹತ್ವ ಹಾಗೂ ಅಗತ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ಸ್ವೀಕೃತವಾಗಿಲ್ಲ ಎಂದು ಹಣಕಾಸು ಸಚಿವಾಲಯದ ಸಲಹೆಗಾರ ಸಲೆಹುದ್ದೀನ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಢಾಕಾದಲ್ಲಿನ ಬ್ಯಾಂಕ್ ಪ್ರಧಾನ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿದ್ದರು. ಅಬ್ದುಲ್ ರೌಫ್ 2022ರ ಜುಲೈನಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ನಾಲ್ಕು ಡೆಪ್ಯುಟಿ ಗವರ್ನರ್ಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ 300-400 ಬ್ಯಾಂಕ್ ಅಧಿಕಾರಿಗಳು ಬಲವಂತವಾಗಿ ರಾಜೀನಾಮೆ ಕೊಡಿಸಿದ್ದರು.
ನುಸುಳುಕೋರರನ್ನು ಹಿಮ್ಮೆಟ್ಟಿಸಿದ ಬಿಎಸ್ಎಫ್: ಪಶ್ಚಿಮ ಬಂಗಾಳದ ಕೂಚ್ ಬೆಹರ್ ಜಿಲ್ಲೆಯಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದವರನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಸದೆಬಡಿದಿದ್ದಾರೆ. ನಂತರ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ (ಬಿಜಿಬಿ) ಅಧಿಕಾರಿಗಳನ್ನು ಸಂರ್ಪಸಿದ ಬಿಎಸ್ಎಫ್ ಅಧಿಕಾರಿಗಳು ನುಸುಳುಕೋರರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ. ಭಾರತದಲ್ಲಿ ಆಶ್ರಯ ಪಡೆಯುವ ಸಲುವಾಗಿ ಸುಮಾರು 1 ಸಾವಿರ ಬಾಂಗ್ಲಾದೇಶಿಯರು ನುಸುಳಲು ಯತ್ನಿಸಿದ್ದರು. ಆದರೆ ಸ್ಥಳೀಯ ಜಿಲ್ಲಾಡಳಿತದ ಸಹಕಾರದೊಂದಿಗೆ ಬಿಎಸ್ಎಫ್ ಈ ನುಸುಳುವಿಕೆಯನ್ನು ವಿಫಲಗೊಳಿಸಿದೆ. ಸಂಭಾವ್ಯ ನುಸುಳುವಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಯುದ್ದಕ್ಕೂ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಎಸ್ಎಫ್ ಪಿಆರ್ಒ ತಿಳಿಸಿದ್ದಾರೆ.
205ಕ್ಕೂ ಹೆಚ್ಚು ದಾಳಿ: ಶೇಖ್ ಹಸೀನಾ ನೇತೃತ್ವದ ಸರ್ಕಾರ ಆ. 6ರಂದು ಪತನಗೊಂಡ ಬಳಿಕ ಅಲ್ಲಿನ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ ಮೇಲೆ ಹಲ್ಲೆ ಪ್ರಕರಣಗಳು 205ಕ್ಕೂ ಅಧಿಕ ನಡೆದಿವೆ ಎಂದು ಬಾಂಗ್ಲಾದೇಶ್ ಹಿಂದು ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್ ಮತ್ತು ಬಾಂಗ್ಲಾದೇಶ್ ಪೂಜಾ ಉಡ್ಜಾಪನ್ ಪರಿಷದ್ ಸಂಘಟನೆಗಳು ತಿಳಿಸಿವೆ.
ಬಾಂಗ್ಲಾ ಹಿಂದುಗಳಿಗೆ ಆಶ್ರಯ ನೀಡಲು ಮನವಿ: ಬಾಂಗ್ಲಾದೇಶದಲ್ಲಿನ ಹಿಂಸಾತ್ಮಕ ಪ್ರತಿಭಟನೆಯಿಂದ ನಲುಗಿರುವ ಹಿಂದುಗಳಿಗೆ ಅಮೆರಿಕದಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡುವಂತೆ ಸ್ಟೇಟ್ ಸೆಕ್ರೆಟರಿ ಅಂಟೋನಿ ಬ್ಲಿಂಕೆನ್ ಅವರ ಬಳಿ ಇಂಡಿಯನ್-ಅಮೆರಿಕನ್ ಶಾಸಕ ಶ್ರೀಥಾಣೇದಾರ್ ಮನವಿ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ತಾತ್ಕಾಲಿಕವಾಗಿ ನಿರಾಶ್ರಿತ ಸ್ಥಾನಮಾನ ನೀಡಿ ಆಶ್ರಯ ಒದಗಿಸುವಂತೆ ಅವರು ಕೋರಿದ್ದಾರೆ. ಹಿಂಸಾಚಾರ ಮತ್ತು ನಾಗರಿಕ ಶಾಂತಿ ಅಂತ್ಯಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಸಹಾಯ ಮಾಡು ವುದು ಅಮೆರಿಕದ ಜವಾಬ್ದಾರಿ ಆಗಿದೆ. ಕಿರುಕುಳಕ್ಕೆ ಒಳಗಾದ ಬಾಂಗ್ಲಾದೇಶದ ಹಿಂದುಗಳು ಮತ್ತು ಇತರ ಧಾರ್ವಿುಕ ಅಲ್ಪಸಂಖ್ಯಾತರಿಗೆ ತಾತ್ಕಾಲಿಕ ನಿರಾಶ್ರಿತ ಸ್ಥಾನಮಾನ ನೀಡಿ ರಕ್ಷಣೆ ಒದಗಿಸುವಂತೆ ನಾನು ಬೈಡೆನ್ ಅವರಲ್ಲಿ ಮನವಿ ಮಾಡಿಕೊಳ್ಳು ತ್ತಿದ್ದೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳ ನ್ಯಾಯಾಧೀಶರ ಸುರಕ್ಷೆ ದೃಷ್ಟಿಯಿಂದ ನಾನು ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. | ಒಬೈದುಲ್ ಹಸನ್ . ಸುಪ್ರೀಂಕೋರ್ಟ್ ನಿವೃತ್ತ ಸಿಜೆಐ