ಬಹುದೂರ ಈಜಿ ಭಾರತಕ್ಕೆ ಬಂದನೇಕೆ ಬಾಂಗ್ಲಾ ನಿವಾಸಿ? 'ಅಂತೂ ಬಂದೆ' ಅನ್ನುವಷ್ಟರಲ್ಲಿ ಆಗಿದ್ದೇನು?

swim
Published on

ನವದೆಹಲಿ: ವಿಶ್ವದ ಬಹುತೇಕ ರಾಷ್ಟ್ರಗಳನ್ನು ಗಮನಕ್ಕೆ ತೆಗೆದುಕೊಂಡರೆ, ಭಾರತದಲ್ಲಿ ಕರೊನಾ ಸೋಂಕಿನ ನಿಯಂತ್ರಣ ಹಾಗೂ ಚಿಕಿತ್ಸೆ ಬಗ್ಗೆ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಅದೇ ಇನ್ನೊಂದೆಡೆ, ಎಲ್ಲಾ ಸಮುದಾಯದವರಿಗೂ ಭಾರತ ಸುರಕ್ಷಿತ ತಾಣ ಎನ್ನುವ ಮಾತೂ ಇದೆ.

ಈ ಸತ್ಯವನ್ನೇ ಅರಿತ ಬಾಂಗ್ಲಾದೇಶದ ಯುವಕನೊಬ್ಬ ಭಾರತಕ್ಕೆ ಬರುವ ಯೋಚನೆ ಮಾಡಿದ. ಆದರೆ ಈಗಂತೂ ಯಾವುದೇ ಸೌಲಭ್ಯಗಳು ಇಲ್ಲದ ಕಾರಣ, ಬರುವುದಂತೂ ಸಾಧ್ಯವೇ ಇಲ್ಲ. ಆದ್ದರಿಂದ ಈ ಯುವಕ ಯೋಚನೆ ಮಾಡಿ ಮಾಡಿ ಅಂತೂ ಒಂದು ನಿರ್ಧಾರಕ್ಕೆ ಬಂದ. ಅದೇನಂತೀರಾ? ಈಜಿ ಭಾರತವನ್ನು ಸೇರುವ ನಿರ್ಧಾರವದು!

ಸರಿ. ಕಾರ್ಯರೂಪಕ್ಕೆ ಇಳಿದ ವ್ಯಕ್ತಿ ಧೈರ್ಯದಿಂದ ಸಮುದ್ರಕ್ಕೆ ಇಳಿದ. ಈಜಿ ಈಜಿ ಅಂತೂ ಭಾರತಕ್ಕೆ ಪ್ರವೇಶಿಸಿಯೇ ಬಿಟ್ಟ. ಅಬ್ಬಾ! ಎಂದು ನಿಟ್ಟುಸಿರನ್ನೂ ಬಿಟ್ಟ. ಆದರೆ ಮುಂದೆ ಆದದ್ದೇ ಬೇರೆ!

ಅಷ್ಟಕ್ಕೂ ಯಾರೀತ? ಈಜಿ ಭಾರತಕ್ಕೆ ಬರುವ ಯೋಚನೆ ಮಾಡಿದ್ದೇಕೆ ಎನ್ನುವುದೂ ಕುತೂಹಲವೇ. ಈ ಯುವಕನ ಹೆಸರು ಅಬ್ದುಲ್ ಹಖ್. 30 ವರ್ಷದ ಅಬ್ದುಲ್​ ಬಾಂಗ್ಲಾದೇಶದ ಸುನಾಮ್ ಗಂಝ್ ಜಿಲ್ಲೆಯ ನಿವಾಸಿ. ಇವನಿಗೆ ಅನೇಕ ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ತನಗೆ ಕರೊನಾ ಸೋಂಕು ಇದೆಯೇನೋ ಎಂಬ ಬಗ್ಗೆ ಅನುಮಾನ ಹುಟ್ಟಿತ್ತು. ಆದರೆ ತನ್ನ ದೇಶಕ್ಕಿಂತ ಭಾರತದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ ಎಂಬ ಯೋಚನೆ ಮಾಡಿದ್ದ ಈತ.

ಭಾರತ ಮತ್ತು ಬಾಂಗ್ಲಾ ದೇಶದ ಗಡಿ ಭಾಗದ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಸುದ್ದಿ ಹರಡಿತ್ತು. ಸರಿ ತಾನೂ ಅಲ್ಲಿಯವನೇ ಅಂದುಬಿಟ್ಟರೆ ಸುಲಭದಲ್ಲಿ ಚಿಕಿತ್ಸೆ ಸಿಗುತ್ತದೆ ಎಂದು ಯೋಚಿಸಿದ ಈ ಯುವಕ, ನದಿಯಲ್ಲಿ ಈಜುತ್ತಾ ಅಸ್ಸಾಂ ತಲುಪಿದ.

ಮೊನ್ನೆ ಭಾನುವಾರ ಬೆಳಗ್ಗೆ ಏಳೂವರೆ ಸುಮಾರಿಗೆ ಗಡಿ ಸಮೀಪ ಬರುತ್ತಿದ್ದಂತೆಯೇ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ಈಜುತ್ತಿರುವುದನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಬಿಎಸ್​ಎಫ್​ ಯೋಧರು ಆತನನ್ನು ಹಿಡಿದು ವಿಚಾರಿಸಿದಾಗ ವಿಷಯ ತಿಳಿಸಿದ್ದಾನೆ ಅಬ್ದುಲ್​. ನಂತರ ಇದು ಅಕ್ರಮ ಪ್ರವೇಶ ಎನ್ನುವ ಕಾರಣಕ್ಕೆ ಆತನನ್ನು ಬಿಎಸ್ ಎಫ್ ಅಧಿಕಾರಿಗಳು ಬಾಂಗ್ಲಾದೇಶ್ ಬಾರ್ಡರ್ ಗಾರ್ಡ್ಸ್​ಗೆ (ಬಿಜಿಬಿ) ಹಸ್ತಾಂತರಿಸಿದ್ದಾರೆ.

ಕರೀಂಗಂಜ್ ನಗರದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಮುಬಾರಕ್​ಪುರದ ಬಳಿ ಈ ಘಟನೆ ನಡೆದಿದೆ. ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗ ಇದಾಗಿದ್ದರೂ ತಂತಿ ಬೇಲಿ ಇಲ್ಲ. ಇದರಿಂದ ಸುಲಭದಲ್ಲಿ ಇಲ್ಲಿಂದ ನುಸುಳಬಹುದಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. 'ಯುವಕನಿಗೆ ಜ್ವರ ಇದ್ದಂತೆ ತೋರುತ್ತಿತ್ತು. ತನಗೆ ಸೋಂಕು ತಗುಲಿರಬಹುದು ಎಂಬ ಕಾರಣಕ್ಕೆ ಚಿಕಿತ್ಸೆ ದೊರೆಯುತ್ತದೆಯಾ ಎಂದು ನೋಡಲು ಭಾರತಕ್ಕೆ ಬಂದಿದ್ದೆ ಎಂದು ಆತ ತಿಳಿಸಿದ' ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net