

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಕೈಮೀರಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪರಿಸ್ಥಿತಿ ನಿಭಾಯಿಸಲು ಸೇನೆ ಮಧ್ಯೆ ಪ್ರವೇಶಿಸಿದೆ.
ಇಡೀ ದೇಶವೇ ಸೇನೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಅದರ ಮುಖ್ಯಸ್ಥ ವಾಕರ್ ಉಜ್ ಝಮಾನ್ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿ, ಶೀಘ್ರದಲ್ಲೇ ಉಸ್ತುವಾರಿ ಸರ್ಕಾರ ರಚನೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಹಿಂಸಾಚಾರದ ಹಾದಿ ತೊರೆಯುವಂತೆ ಪ್ರತಿಭಟನಾಕಾರರಿಗೆ ಝಮಾನ್ ಕರೆ ನೀಡಿದರು. ಈ ಮೊದಲು ಶೇಖ್ ಹಸೀನಾಗೆ ಸೇನೆ ಕೆಳಗಿಳಿಯಲು ಆಕೆಗೆ 45 ನಿಮಿಷಗಳ ಕಾಲಾವಕಾಶ ನೀಡಿತ್ತು ಎಂದು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಹಸೀನಾ ತ್ರಿಪುರಾ ರಾಜಧಾನಿ ಅಗರ್ತಲಾ ತಲುಪಿರುವುದಾಗಿ ಗೊತ್ತಾಗಿದೆ. ಅಲ್ಲಿಂದ ಲಂಡನ್ ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
"ನಾವು ಉಸ್ತುವಾರಿ ಸರ್ಕಾರವನ್ನು ರಚಿಸುತ್ತೇವೆ. ಪ್ರತಿಭಟನೆಯಿಂದ ಈ ದೇಶವು ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಅನೇಕ ಜೀವಗಳನ್ನು ಕಳೆದುಕೊಂಡಿದೆ. ಈ ಹಿಂಸಾಚಾರವನ್ನು ನಿಲ್ಲಿಸುವ ಸಮಯ ಬಂದಿದೆ. ನನ್ನ ಭಾಷಣದ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಬದಲಾವಣೆಯಾದರೆ. ಪರಿಸ್ಥಿತಿ... ತುರ್ತು ಪರಿಸ್ಥಿತಿಯ ಅಗತ್ಯವಿರುವುದಿಲ್ಲ" ಎಂದು ಸೇನಾ ಮುಖ್ಯಸ್ಥರು ಟಿವಿ ಭಾಷಣದಲ್ಲಿ ಮನವಿ ಮಾಡಿದರು. ಆಗ ಹಸೀನಾ ರಾಜೀನಾಮೆ ನೀಡಿದ್ದರು.
ಈ ಬೆಳವಣಿಗೆಗಳ ಸಮಯದಲ್ಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಾಜಿದ್ ವಾಜೆದ್ ಜಾಯ್ ಅವರು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುವುದನ್ನು ತಡೆಯಲು ಅವರು ಸೈನ್ಯವನ್ನು ಕೇಳಿಕೊಂಡಿದ್ದಾರೆ. ಅವರು ಪ್ರಧಾನಿಯವರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.