ವಯನಾಡು ದುರಂತಕ್ಕೆ ಕಾರಣ..? ಕೇಂದ್ರ ಪರಿಸರ ಸಚಿವರು ಹೇಳಿದ್ದೇನು?

bhupendra
Published on

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರಿ ಭೂಕುಸಿತಕ್ಕೆ ಅಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ವಸಾಹತುಗಳೇ ಪ್ರಮುಖ ಕಾರಣ. ಇವು ಮಿತಿ ಮೀರಿದ್ದರಿಂದ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅಭಿಪ್ರಾಯಪಟ್ಟರು.

ಅಕ್ರಮ ವಸತಿಗೆ ಸ್ಥಳೀಯ ರಾಜಕಾರಣಿಗಳು ರಕ್ಷಿಸಿದ್ದಾರೆ. ಪ್ರವಾಸೋದ್ಯಮ ಹೆಸರಲ್ಲಿ ಸರಿಯಾದ ವಲಯಗಳನ್ನು ಸ್ಥಾಪಿಸಿಲ್ಲ. ಈ ಭಾಗದಲ್ಲಿ ಭೂಕಬಳಿಕೆ ನಡೆದಿದೆ ಎಂದು ಕೇಂದ್ರ ಸಚಿವರು ಆರೋಪಿಸಿದರು.

ಭೂಕುಸಿತ ನಡೆದ ಪ್ರದೇಶ ‘ಅತಿ ಸೂಕ್ಷ್ಮ ಪ್ರದೇಶ’. ಈಗಾಗಲೇ ಅರಣ್ಯ ಇಲಾಖೆಯ ಮಾಜಿ ಮಹಾನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ಪಡೆಯಲಾಗುವುದು. ಸ್ಥಳೀಯ ಆಡಳಿತ ಯಂತ್ರದ ರಕ್ಷಣೆಯಲ್ಲಿ ಅಕ್ರಮ ಬಡಾವಣೆಗಳಿದ್ದು, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಭೂಪೇಂದರ್ ಯಾದವ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ.

ಇನ್ನು ವಯನಾಡಿನಲ್ಲಿ ಕಳೆದ ವಾರ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 222 ಕ್ಕೆ ತಲುಪಿದೆ. 99 ಪುರುಷರು, 88 ಮಹಿಳೆಯರು ಮತ್ತು 37 ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ 172 ಮೃತ ದೇಹಗಳನ್ನು ಸಂಬಂಧಿಕರು ಗುರುತಿಸಿದ್ದಾರೆ. 180 ಮೃತ ದೇಹಗಳ ಭಾಗಗಳು ವಿವಿಧ ಸ್ಥಳಗಳಿಂದ ಪತ್ತೆಯಾಗಿವೆ ಮತ್ತು 161 ಮರಣೋತ್ತರ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net