ಭಾರತಕ್ಕೆ ಬಂದಿಳಿದ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ; ಹಿಂಡನ್ ಏರ್​​ಬೇಸ್​​​​ನಲ್ಲಿ ಲ್ಯಾಂಡಿಂಗ್ ಆಗಿದ್ದು ಯಾಕೆ?

Untitled-design-33
Published on

ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಸಿ-130 ಸಾರಿಗೆ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದರು. ಭಾರತೀಯ ವಾಯುಪಡೆಯ C-17 ಮತ್ತು C-130J ಸೂಪರ್ ಹರ್ಕ್ಯುಲಸ್ ವಿಮಾನ ಹ್ಯಾಂಗರ್‌ಗಳ ಬಳಿ ವಿಮಾನವನ್ನು ನಿಲ್ಲಿಸಲಾಗುತ್ತದೆ.

ವಿಮಾನವು ಭಾರತೀಯ ವಾಯುಪ್ರದೇವನ್ನು ಪ್ರವೇಶಿಸಿದಾಗಿನಿಂದ ಗಾಜಿಯಾಬಾದ್​​ನ ಹಿಂಡನ್ ವಾಯುನೆಲೆಗೆ ಇಳಿಯುವವರೆಗೂ ವಿಮಾನದ ಚಲನವಲನಗಳನ್ನು ಭಾರತೀಯ ವಾಯುಸೇನೆ ಮತ್ತು ಭದ್ರತಾ ಏಜೆನ್ಸಿಗಳು ಮೇಲ್ವಿಚಾರಣೆ ಮಾಡಿತು. ಶೇಖ್ ಹಸೀನಾ ಅವರು ವಿಮಾನ ಇಳಿಯುವ ಮುನ್ನ ಹಿಂಡನ್ ವಾಯುನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಆರಂಭವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದ ಬಳಿಕ ಶೇಖ್​ ಹಸೀನಾ ಅವರು ರಾಜೀನಾಮೆ ನೀಡಿ ಢಾಕಾ ತೊರೆದು ಭಾರತವನ್ನು ತಲುಪಿದ್ದಾರೆ. ಸ್ವಲ್ಪ ಸಮಯ ಭಾರತದಲ್ಲೇ ಉಳಿಯಲಿದ್ದು ನಂತರ ಲಂಡನ್​ಗೆ ತೆರಳಲಿದ್ದಾರೆ ಎನ್ನಲಾಗಿದೆ. ಮಿಲಿಟರಿ ಸಾರಿಗೆ ವಿಮಾನವು ಅವರನ್ನು ಭಾರತದಿಂದ ಆಚೆಗೆ ಕರೆದೊಯ್ಯುತ್ತದೆಯೇ ಅಥವಾ ಬೇರೆ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸುತ್ತಾರೆಯೊ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಢಾಕಾದಲ್ಲಿನ ಬೆಳವಣಿಗೆಗಳ ಬಗ್ಗೆ ನವದೆಹಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಾಮಾನ್ಯವಾಗಿ ಯಾವುದೇ ರಾಷ್ಟ್ರದ ಮುಖ್ಯಸ್ಥರು ಭಾರತಕ್ಕೆ ಬಂದಾಗ ಅವರನ್ನು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗುತ್ತದೆ. ಆದರೆ ಈ ಬಾರಿ ಶೇಖ್ ಹಸೀನಾ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರ ವಿಮಾನವನ್ನು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ಏರ್‌ಬೇಸ್‌ನಲ್ಲಿ ಇಳಿಸಲಾಯಿತು. ಅದಕ್ಕೂ ಒಂದು ಕಾರಣವಿದೆ.

ಹಿಂಡನ್ ಏರ್‌ಬೇಸ್‌ ಏಷ್ಯಾದ ಅತಿದೊಡ್ಡ ವಾಯುನೆಲೆಯಾಗಿದ್ದು, ಇಲ್ಲಿ ವಾಯುಪಡೆಯ ನಿಯಂತ್ರಣವಿದೆ. ಭಾರತದ ಅನೇಕ ಪರಮಾಣು ಸಾಮರ್ಥ್ಯದ ವಿಮಾನಗಳು ಮತ್ತು ಯುದ್ಧ ವಿಮಾನಗಳು ಯಾವಾಗಲೂ ಈ ವಾಯುನೆಲೆಯಲ್ಲಿ ಇರುತ್ತವೆ. ಇದಲ್ಲದೇ ಸಾಮಾನ್ಯ ವಿಮಾನ ನಿಲ್ದಾಣಗಳಿಗಿಂತ ಇಲ್ಲಿ ಭದ್ರತೆ ಹೆಚ್ಚು. ಶೇಖ್ ಹಸೀನಾ ಭಾರತಕ್ಕೆ ಬಂದಿರುವ ಸಮಯ ಸಾಮಾನ್ಯವಾಗಿಲ್ಲ. ಇದೇ ಕಾರಣಕ್ಕೆ ಶೇಖ್ ಹಸೀನಾ ಅವರ ವಿಮಾನವನ್ನು ದೆಹಲಿಯ ಜನನಿಬಿಡ ಐಜಿಐ ವಿಮಾನ ನಿಲ್ದಾಣದ ಬದಲು ಯುಪಿಯ ಹಿಂಡನ್‌ನಲ್ಲಿ ಇಳಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net