

ಢಾಕಾ: ಬಾಂಗ್ಲಾದೇಶದಲ್ಲಿನ ಹಿಂದುಗಳು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಮರುದಿನವೇ ಬಾಂಗ್ಲಾದೇಶದ ನೂತನ ಗೃಹ ಸಚಿವ ಶೇಖಾವತ್ ಹೊಸೈನ್ ಕ್ಷಮೆ ಕೋರಿದ್ದಾರೆ. ‘ನಿಮ್ಮನ್ನು ರಕ್ಷಿಸಲು ಆಗದ್ದಕ್ಕೆ ಕ್ಷಮಿಸಿ’ ಎಂದು ಅವರು ಹಿಂದುಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಹಿಂದು ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮುಸ್ಲಿಂ ಬಹುಸಂಖ್ಯಾತರ ಕರ್ತವ್ಯ ಎಂದಿರುವ ಅವರು, ಆ ಹೊಣೆಗಾರಿಕೆ ನಿಭಾಯಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದಿದ್ದಾರೆ. ಭವಿಷ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿರುವ ಅವರು, ಪರಿಸ್ಥಿತಿ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಬಗ್ಗೆಯೂ ಮಾತನಾಡಿರುವ ಅವರು, ‘ಆ ಪಕ್ಷವು ಬಾಂಗ್ಲಾದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ, ನಾವದನ್ನು ಒಪು್ಪತ್ತೇವೆ. ಸಮಯ ಬಂದಾಗ ಅವರು ಚುನಾವಣೆಗೆ ಸ್ಪರ್ಧಿಸಲಿ’ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂಬುದಾಗಿ ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ, ನಿವೃತ್ತ ಬ್ರಿಗೇಡಿಯರ್ ಎಂ. ಶೇಖಾವತ್ ಹೇಳಿದ್ದಾರೆ.
ಪಾಕ್ ಸೇನಾ ಶರಣಾಗತಿ ಪ್ರತಿಮೆ ಧ್ವಂಸ?: ಭಾರತ ವಿರೋಧಿ ವಿಧ್ವಂಸಕರು ಬಾಂಗ್ಲಾದೇಶದ 1971ರ ಯುದ್ಧದಲ್ಲಿ ಪಾಕಿಸ್ತಾನ ಸೇನೆಯ ಶರಣಾಗತಿಯ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ನೀಡಿರುವ ಹೇಳಿಕೆ ಗೊಂದಲವನ್ನು ಸೃಷ್ಟಿಸಿದೆ. ಬಾಂಗ್ಲಾದೇಶದ ಮುಜಿಬ್ನಗರದಲ್ಲಿನ ಲಿಬರೇಷನ್ ವಾರ್ ಮೆಮೋರಿಯಲ್ ಕಾಂಪ್ಲೆಕ್ಸ್ನ ಪ್ರತಿಮೆಗಳ ಚಿತ್ರಗಳನ್ನು ಸೋಮವಾರ ಎಕ್ಸ್ನಲ್ಲಿ ಹಂಚಿಕೊಂಡು ಅದನ್ನು ಭಾರತೀಯ ವಿರೋಧಿ ವಿಧ್ವಂಸಕರು ಧ್ವಂಸಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೆ ತಪು್ಪ ಮಾಹಿತಿಯೊಂದಿಗೆ ನಕಲಿ ಚಿತ್ರಗಳನ್ನು ಹಂಚಿಕೊಳ್ಳಬೇಡಿ ಎಂದು ಕೆಲವು ನೆಟ್ಟಿಗರು ಟೀಕಿಸಿದ್ದಾರೆ. ಅದು ಧ್ವಂಸಗೊಳಿಸಿದ ಪ್ರತಿಮೆಗಳಲ್ಲ, ಅವು ಇರುವುದೇ ಹಾಗೇ ಎಂದು ಹಲವರು ಶಶಿ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ಪ್ರತಿಭಟನೆ ವಾಪಸ್: ತಮ್ಮ ಹನ್ನೊಂದು ಬೇಡಿಕೆಗಳ ಪೈಕಿ ಬಹುತೇಕವುಗಳನ್ನು ಈಡೇರುವ ಭರವಸೆ ಸಿಕ್ಕಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆ ದಿರುವುದಾಗಿ ಬಾಂಗ್ಲಾದೇಶದ ಪೊಲೀಸರು ಘೋಷಿಸಿದ್ದಾರೆ. ಪ್ರತಿಭಟನಾನಿರತರು ಮಧ್ಯಂತರ ಸರ್ಕಾರದ ಗೃಹ ವ್ಯವಹಾರಗಳ ನೂತನ ಸಲಹೆಗಾರರನ್ನು ಭೇಟಿಯಾದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಶೇಖ್ ಹಸೀನಾ ಸರ್ಕಾರ ಜಾರಿಗೆ ತಂದಿದ್ದ ಉದ್ಯೋಗದಲ್ಲಿನ ಮೀಸಲಾತಿ ನೀತಿ ವಿರೋಧಿಸಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪೊಲೀಸರು ಆಗಸ್ಟ್ 6ರಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಾಂಗ್ಲಾದೇಶ್ ಪೊಲೀಸ್ ಸಬ್ಆರ್ಡಿನೇಟ್ ಎಂಪ್ಲಾಯೀಸ್ ಅಸೋಸಿಯೇಷನ್ ಈ ಪ್ರತಿಭಟನೆಯನ್ನು ಘೋಷಿಸಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಚ್ಚಿ ಶೇಖ್ ಹಸೀನಾ ಭಾರತಕ್ಕೆ ಪರಾರಿಯಾದ ಬಳಿಕ ಎಷ್ಟೋ ಮಂದಿ ಪೊಲೀಸರು ಜೀವಭಯದಲ್ಲಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇನ್ನು ಕೆಲವರು ಠಾಣೆಗಳಿಗೆ ಸಮವಸ್ತ್ರ ಧರಿಸದೆ ಬಂದು ಹೋಗುತ್ತಿದ್ದರು. ಇದೀಗ ಆ ಪ್ರತಿಭಟನೆಯನ್ನು ಪೊಲೀಸರು ಹಿಂಪಡೆದುಕೊಂಡಿದ್ದಾರೆ.