

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ಲೋಕಾರ್ಪಣೆ ಮತ್ತು ಬಂಗಾರಪ್ಪ ಸವಿನೆನಪು ಕಾರ್ಯಕ್ರಮ ಡಿ.26ರಂದು ಸಂಜೆ 4.30ಕ್ಕೆ ಸೊರಬದ ಬಂಗಾರಧಾಮದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ನಟ, ಬಂಗಾರಪ್ಪ ವಿಚಾರ ವೇದಿಕೆ ಪ್ರಮುಖ ನಾಗರಾಜ ಮೂರ್ತಿ ತಿಳಿಸಿದರು.
12ನೇ ವರ್ಷದ ಪುಣ್ಯಸ್ಮರಣೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಮುಖ್ಯ ಅತಿಥಿಗಳಾಗಿದ್ದು ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಅಭಿನಂದನಾ ನುಡಿಗಳನ್ನಾಡುವರು ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭವಿಷ್ಯದಲ್ಲಿ ಬಂಗಾರಧಾಮದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ. ಈಗಾಗಲೇ ವಿಚಾರ ವೇದಿಕೆಯಿಂದ ಪ್ರತಿವರ್ಷ ಗ್ರಾಮೀಣ ಪ್ರತಿಭೆಗಳಿಗೆ ಬಂಗಾರ ಪ್ರಶಸ್ತಿ ನೀಡಲಾಗುತ್ತಿದೆ. ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಪ್ರತಿ ವರ್ಷ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತಿತ್ತು. ಈ ಬಾರಿ ಬಂಗಾರಧಾಮದಲ್ಲಿ ಸ್ಮಾರಕ ನಿರ್ಮಾಣಗೊಂಡಿದ್ದು ಈ ಬಾರಿ ವಿಶೇಷವಾಗಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಹೇಳಿದರು. ಪ್ರಮುಖರಾದ ಜಿ.ಡಿ.ಮಂಜುನಾಥ್, ಗೋಪಾಲಕೃಷ್ಣ, ಶಮಂತ, ಗಿರೀಶ್ ಇದ್ದರು.