

ಬಂಗಾರಪೇಟೆ ಗ್ರಾಮಾಂತರ : ಉಚಿತ ನಿವೇಶನ ನೀಡಲು ವಿಫಲವಾಗಿರುವ ತಾಲೂಕು ಆಡಳಿತದ ಧೋರಣೆ ಖಂಡಿಸಿ ಹುಣಸನಹಳ್ಳಿಯ ನಿರಾಶ್ರಿತರು ರಾತ್ರೋರಾತ್ರಿ ಗೋಮಾಳ ಜಮೀನಿನಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಶುಕ್ರವಾರ ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಪಂ ಹುಣಸನಹಳ್ಳಿಯಲ್ಲಿ ಹಲವು ವರ್ಷಗಳಿಂದ ಸ್ವಂತ ಮನೆಯಿಲ್ಲದೆ ಸುಮಾರು 35 ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಾಗಿವೆ. ಗ್ರಾಪಂ ಹಾಗೂ ತಾಲೂಕು ಆಡಳಿತಕ್ಕೆ ಮನೆ ನಿರ್ಮಾಣಕ್ಕೆ ಹಾಗೂ ಉಚಿತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ ಇದುವರೆಗೂ ಗಮನಹರಿಸದ ಕಾರಣ ದಲಿತ ರೈತ ಸೇನೆ ಸಂಘದ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ 35 ನಿರಾಶ್ರಿತ ಕುಟುಂಬಗಳು ಆನಂದಗಿರಿ ಬಳಿಯಿರುವ ವಿ.ಆರ್.ವೆಂಚರ್ಸ್ ಲೇಔಟ್‌ಗೆ ಹೊಂದಿಕೊಂಡಿರುವ ಸರ್ವೇ ನಂ 22ರ 1 ಎಕರೆ 20 ಗುಂಟೆ ಜಾಗದಲ್ಲಿ ಗುರುವಾರ ರಾತ್ರಿ ಗುಡಿಸಲು ನಿರ್ಮಿಸಿಕೊಂಡು ನಮಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.
ವಿ.ಆರ್.ವೆಂಚರ್ಸ್ ಲೇಔಟ್ ಮಾಲೀಕರು ಲೇಔಟ್ ನಿರ್ಮಾಣಕ್ಕೆ ಗೋಮಾಳ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತ ಮತ್ತು ತಹಸೀಲ್ದಾರ್‌ಗೆ ಒತ್ತಾಯಿಸಿದ್ದರೂ ತೆರವುಗೊಳಿಸದ ಕಾರಣ ನಿರಾಶ್ರಿತರು ಒತ್ತುವರಿ ಜಾಗದಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ದಲಿತ ರೈತ ಸೇನೆ ಮುಖಂಡರು ತಿಳಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಎಂ.ದಯಾನಂದ್ ಆಗಮಿಸಿ, ಈ ಜಾಗವನ್ನು ನಿರಾಶ್ರಿತರಿಗೆ ನೀಡಲು ಹಿಂದೆಯೇ ತೀರ್ಮಾನಿಸಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರೂ ಗುಡಿಸಲು ತೆರವುಗೊಳಿಸಿಲ್ಲ.
ಸ್ಥಳಕ್ಕೆ ವಿ.ಆರ್.ವೆಂಚರ್ಸ್ ವ್ಯವಸ್ಥಾಪಕ ಸುನೀಲ್ ಆಗಮಿಸಿ ಲೇಔಟ್ ನಿರ್ಮಾಣಕ್ಕೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿಲ್ಲ. ಹಲವು ಬಾರಿ ಆರೋಪ ಬಂದಿದ್ದರಿಂದ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 3 ಬಾರಿ ಸವೇ ನಡೆದಿದೆ. ಅದರಲ್ಲಿ ಲೇಔಟ್ ನಿರ್ಮಾಣಕ್ಕೆ ಗೋಮಾಳ ಜಾಗ ಒತ್ತುವರಿ ನಡೆದಿಲ್ಲ ಎಂಬ ಕ್ಲೀಮ್‌ಚಿಟ್ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.