ರಾಜಕಾಲುವೆಗೆ ಎರಡೆರಡು ಬಾರಿ ಧುಮುಕಿದ ಕುಡುಕ; ಮೇಲೆ ಬಾ ಎಂದರೆ ಆತ ಹೇಳಿದ್ದೇನು...?!

DRIANAGE
Published on

ಬೆಂಗಳೂರು: ಲಾಲ್ ಬಾಗ್ ರೋಡ್​ನ ರಾಜಕಾಲುವೆಗೆ ಬಿದ್ದು ಕುಡುಕನೊಬ್ಬ ರಾಜಕಾಲುವೆಯಿಂದ ಮೇಲೆ ಬರಲ್ಲ ಅಂತ ಚರಂಡಿಯಲ್ಲೇ ಚಂಡಿ ಹಿಡಿದಿದ್ದಾನೆ.

ಚರಂಡಿಯ ದುರ್ನಾತ ಬೀರುವ ನೀರಿನಲ್ಲೇ ಕುಡುಕನ ಸ್ವಿಮ್ಮಿಂಗ್ ಸಾಗಿದೆ. ಈತನನ್ನು ಮೇಲೆತ್ತಲು ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಸಲಾಯಿತು. ಆದರೆ ರಕ್ಷಿಸಲು ಹೋದ ಯುವಕರ ಮೇಲೆ ಕುಡುಕ ಹಲ್ಲೆಗೆ ಯತ್ನಿಸಿದ್ದಾನೆ.

ಎರಡನೇ ಬಾರಿಗೆ ಹಾರಿದ ಮೊದಲು ಒಮ್ಮೆ ಆತನನ್ನು ಮೇಲೆತ್ತಿ, ರಕ್ಷಿಸಿದ್ದ ಸ್ಥಳಿಯ ಯುವಕರು ಮತ್ತು ಎಸ್.ಜೆ. ಪಾರ್ಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಕುಡುಕನಿಗೆ ಬುದ್ದಿ ಹೇಳಿದ್ದಾರೆ. ಅಲ್ಲದೆ, ಕುಡುಕನಿಗೆ ಟೀ ಬನ್ ಕೊಟ್ಟು ಬುದ್ದಿ ಹೇಳಿ ಮನೆಗೆ ಹೋಗು ಎಂದು ಕಳುಹಿಸಿದ್ದಾರೆ.

ಹೂಂ, ಮನೆಗೆ ತೆರಳ್ತಿನಿ ಎಂದು ಮತ್ತೆ ಎರಡನೇ ಬಾರಿಗೆ ರಾಜಕಾಲುವೆಗೆ ಹಾರಿದ್ದಾನೆ. ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿರುವ ಈತ, "ನಾನು ರಾಜಕಾಲುವೆಯಿಂದ‌ ಮೇಲೆ ಬರಲ್ಲ. ಮೇಲೆ ಬಂದ್ರೆ ಚಳಿ ಆಗತ್ತೆ" ಎನ್ನುತ್ತಿದ್ದಾನೆ,

ರಾಜಕಾಲುವೆಯ ಕೆಳಗೆ ಕಸದ ಮಧ್ಯೆ ಅಡಗಿ ಕುಳಿತಿರೋ ಈತನಿಗೆ ಮೇಲೆ ಬಾರೋ ಎಂಬ ಪೊಲೀಸರ ಮಾತಿಗೂ ಡೋಂಟ್ ಕೇರ್ ಅಂತಿದ್ದಾನೆ ಆಸಾಮಿ. ಲಾಲ್​ಬಾಗ್ ರಸ್ತೆಯಿಂದ ಸಂಪಗಿರಾಮನಗರಕ್ಕೆ ಸಂಪರ್ಕ ಕಲ್ಪಿಸೋ ರಾಜಕಾಲುವೆಯ ಕೊಳಚೆಯಲ್ಲೇ ನೂರು ಮೀಟರ್​ಗಳಷ್ಟು ಈಜುತ್ತಾ ಸಾಗಿದ್ದಾನೆ.

ಇಂತಹ ಕುಡುಕ ಮಹಾಶಯನ ಮುಂದೆ ಏನು ಮಾಡಲಾಗದ ಸ್ಥಿತಿಯಲ್ಲಿ ರಾಜಕಾಲುವೆ ಮುಂದೆ ಎಸ್.ಜೆ ಪಾರ್ಕ್ ಠಾಣೆ ಸಿಬ್ಬಂದಿ ನಿಂತಿದ್ದಾರೆ! (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net