ಬೆಂಗಳೂರು ದಕ್ಷಿಣದಲ್ಲೇ 2ನೇ ಏರ್‌ಪೋರ್ಟ್ ಆಗಲಿ; ಕೈ ಶಾಸಕರ ಒತ್ತಡ

airport
Published on

ಬೆಂಗಳೂರು: ಬಹು ಚರ್ಚಿತ ಬೆಂಗಳೂರು ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲೇ ಇದು ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ ಶಾಸಕರು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಹಿನ್ನೆಲೆ ರಾಮನಗರ, ಮಂಡ್ಯ, ಮೈಸೂರು ಭಾಗದ ಜನಪ್ರತಿನಿಧಿಗಳು ಒಟ್ಟಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮೂಲಸೌಲಭ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ ಈ ಭಾಗದ ಜನತೆಗೆ ಅನುಕೂಲವಾಗುವುದರ ಜತೆಗೆ ಬೆಂಗಳೂರು ದಕ್ಷಿಣ ಭಾಗವೂ ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ . ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್, ಮಾಗಡಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಮಳವಳ್ಳಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಕೆ.ಎಂ. ಉದಯ್, ಮಂಡ್ಯ ಶಾಸಕ ಪಿ.ರವಿಕುಮಾರ್, ಆನೇಕಲ್ ಶಾಸಕರಾದ ಶಿವಣ್ಣ, ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ, ಪುಟ್ಟಣ್ಣ ತಂಡ ಒಟ್ಟಾಗಿ ಈ ಬೇಡಿಕೆಯನ್ನು ಮುಂದಿಟ್ಟಿದೆ.

ಮನವಿ ಪತ್ರದ ಸಾರ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ವಿಮಾನ ದಟ್ಟಣೆ ದಿನೇದಿನೇ ಹೆಚ್ಚಾಗುತ್ತಿದೆ. ಈ ಕಾರಣದಿಂದ ಬೆಂಗಳೂರು ನಗರದ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆಯಿದ್ದು ಈ ಸಂಬಂಧ ಈಗಾಗಲೇ ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.

ಬೆಂಗಳೂರಿನ ಉತ್ತರ ಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚರಿಸುವ ಪ್ರಯಾಣಿಕರ ಪೈಕಿ ಅರ್ಧದಷ್ಟು ಪ್ರಯಾಣಿಕರು ದಕ್ಷಿಣ ಭಾಗದವರೇ ಆಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಬನ್ನೇರುಘಟ್ಟ ರಸ್ತೆ, ಜಯನಗರ, ಜೆ.ಪಿ.ನಗರ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಯಾಣಿಕರ ಸಂಚಾರಕ್ಕಾಗಿ ಮೆಟ್ರೋ ಸಂಪರ್ಕವಿದೆ. ಎಲೆಕ್ಟ್ರಾನಿಕ್ ಸಿಟಿ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸಿರುವುದರ ಜತೆಗೆ ನೈಸ್ ರಸ್ತೆಯಂತಹ ಹೊರವಲಯದ ರಸ್ತೆ ಕೂಡ ಇರುವುದರಿಂದ ಸಂಚಾರ ದಟ್ಟಣೆ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ.

ಬೆಂಗಳೂರು ದಕ್ಷಿಣ ಭಾಗದ ಭೂಪ್ರದೇಶ ಸಮತಟ್ಟಗಾಗಿದೆ. ರನ್ ವೇ ನಿರ್ಮಾಣಕ್ಕೆ ಕನಿಷ್ಠ 3-5 ಕಿ.ಮೀ.ನಷ್ಟು ಉದ್ದದ ಸಮತಟ್ಟು ಭೂಮಿಯ ಅವಶ್ಯಕತೆ ಇರುವುದರಿಂದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೆಂಗಳೂರು ದಕ್ಷಿಣ ಭಾಗ ಸೂಕ್ತ ಪ್ರದೇಶವಾಗಿದೆ.

ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಮೈಸೂರಿಗೆ ಬೆಂಗಳೂರಿನಿಂದ ಸಂಚರಿಸುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಪ್ರಯಾಣಿಕರ ಸಂಚಾರಕ್ಕೆ ವರದಾನವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಾಣದ ನಂತರ ರಾಮನಗರ, ಚನ್ನಪಟ್ಟಣ, ಮದ್ದೂರು ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ.

ಕಾವೇರಿ ನದಿ ತಪ್ಪಲಿನ ಈ ಭಾಗದಲ್ಲಿ ನೀರಿನ ಸೌಕರ್ಯ ಕೂಡ ಚೆನ್ನಾಗಿದೆ. ಹೀಗಾಗಿ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ಮಾಡಿದರೆ ಸೂಕ್ತ, ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕೆಂದು ಶಾಸಕರ ತಂಡ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net