

ಬೆಂಗಳೂರು: ರಾಜಧಾನಿಯಲ್ಲಿ ಮಾದಕ ದ್ರವ್ಯ ಮಾರಾಟ, ಸಾಗಾಟ, ಸೇವನೆ ವಿರುದ್ಧ ಸಮರ ಮುಂದುವರಿಸಿದ ಪೊಲೀಸರು, ಆಗಸ್ಟ್‌ನಲ್ಲಿ 495 ಆರೋಪಿಗಳನ್ನು ಬಂಧಿಸಿ 184 ಕೆಜಿ ವಿವಿಧ ಬಗೆಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಪೆಡ್ಲರ್‌ಗಳ ಮಾಹಿತಿ ಸಂಗ್ರಹಿಸಿ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇದರಲ್ಲಿ ಸಿಸಿಬಿ ಪೊಲೀಸರು, ಓರ್ವ ವಿದೇಶಿ ಪ್ರಜೆ ಸೇರಿದಂತೆ 34 ಆರೋಪಿಗಳನ್ನು ಬಂಧಿಸಿ 2.42 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ವೈಟ್‌ಫೀಲ್ಡ್, ವರ್ತೂರು, ಕಾಟನ್‌ಪೇಟೆ, ಮೈಕೋ ಲೇಔಟ್, ಆರ್.ಟಿ.ನಗರ, ಬೊಮ್ಮನಹಳ್ಳಿ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದಾಗ ಕೇರಳದ 15 ಪೆಡ್ಲರ್‌ಗಳು, ಬಿಹಾರದ ನಾಲ್ವರು, ಒಡಿಶಾದ ಇಬ್ಬರು, ಅಸ್ಸಾಂ, ಹರಿಯಾಣದ ತಲಾ ಓರ್ವ ಮತ್ತು ಕರ್ನಾಟಕದ 10 ಆರೋಪಿಗಳು ಸೆರೆಸಿಕ್ಕಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪರಿಚಯಸ್ಥ ಪೆಡ್ಲರ್‌ಗಳಿಂದ ಕಡಿಮೆ ಬೆಲೆಯ ಮಾದಕ ದ್ರವ್ಯ ಖರೀದಿ ಮಾಡಿ ಬಳಿಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇದೇ ರೀತಿ ನಗರದ 8 ಉಪ ವಿಭಾಗದಲ್ಲಿ ಡಿಜಿಪಿ ಮಾರ್ಗದರ್ಶನದಲ್ಲಿ ಪ್ರತ್ಯೇಕ ಮಾದಕ ದ್ರವ್ಯ ದಂಧೆ ವಿರುದ್ಧ ಕಾರ್ಯಾಚರಣೆ ಸಹ ನಡೆದಿದೆ. ಆಗಸ್ಟ್‌ನಲ್ಲಿ 352 ಪ್ರಕರಣಗಳು ದಾಖಲಾಗಿದ್ದು, 461 ಆರೋಪಿಗಳನ್ನು ಬಂಧಿಸಿ 146 ಕೆಜಿ ವಿವಿಧ ಬಗೆಯ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.